ಮಂಗಳೂರು, ಅ 18(SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ಕಾಯಿಲೆ ಭೀತಿ ಹೆಚ್ಚಾಗಿದೆ. ಈಗಾಗಲೇ ನಾಲ್ಕು ಮಂದಿ ಎಚ್1ಎನ್1ಗೆ ಬಲಿಯಾಗಿದ್ದಾರೆ ಎಂಬ ಶಂಕೆ ಇದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಇಲಾಖೆ ಈ ಬಗ್ಗೆ ಸಮಗ್ರ ಅಧ್ಯಯನಕ್ಕೆ ತಂಡಗಳನ್ನು ರಚನೆ ಮಾಡಿಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನುರಿತ ತಜ್ಞರನ್ನು ಮತ್ತು ಆರೋಗ್ಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಶಂಕಿತ ನಾಲ್ಕು ಮರಣ ಪ್ರಕರಣದ ಬಗ್ಗೆ ಸರಕಾರದ ನಿಯಮಾವಳಿಯಂತೆ ತಜ್ಞ ವೈದ್ಯರ ತಂಡದ ವರದಿಯ ಬಳಿಕ ಅಧಿಕೃತ ಘೋಷಣೆ ಮಾಡಲಾಗುವುದು.
ಜನರಲ್ಲಿ ಎಚ್1ಎನ್1ರೋಗದ ಬಗ್ಗೆ ಗೊಂದಲಗಳಿವೆ. ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಈ ಕುರಿತು ಜಿಲ್ಲಾ ಆಸ್ಪತ್ರೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಇನ್ನು ಬಂಟ್ವಾಳ ತಾಲೂಕಿನ ಸಜಿಪನಡುವಿನ ಅವ್ವಮ್ಮ,(48), ಅವರ ಪುತ್ರಿ ಉಳ್ಳಾಲದ ಝಬೀನಾ(24), ಕುಡುಪು ಮಲ್ಲೂರಿನ ಅಬ್ದುಲ್ಲ(50), ಉಳ್ಳಾಲದ ಜಮೀಲಾ(30) ಎರಡೇ ವಾರಗಳ ಅಂತರದಲ್ಲಿ ಮೃತಪಟ್ಟಿದ್ದರು. ಇವರನ್ನು ತಪಾವಣೆ ಮಾಡಿದ ಸಂದರ್ಭದಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಆದರೆ, ಅವರು ಬೇರೆ ಕಾಯಿಲೆಯಿಂದಲೂ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದ್ದು, ಅವರ ವರದಿ ಬಳಿಕ ಸ್ಪಷ್ಟನೆ ಸಿಗಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.