ಉಡುಪಿ, ಅ 18(SM): ಉಡುಪಿ ಜಿಲ್ಲೆಯನ್ನು ಕಾಡುತ್ತಿರುವ ಮರಳು ಆಭಾವ ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಮರಳುಗಾರಿಕೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಇಂದಿನಿಂದ ಉಡುಪಿಯಲ್ಲಿ ಕಟ್ಟಡ ಸಂಬಂಧಿತ ಸರಕು ಸಾಮಾಗ್ರಿಗಳ ವಾಹನ ಸೇವೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟವಧಿ ಮುಷ್ಕರ ನಡೆಯುತ್ತಿದೆ.
ಮರಳು ತೆಗೆಯಲು ಅವಕಾಶ ಕಲ್ಪಿಸಲು ಉಡುಪಿಯಲ್ಲಿ ಕಳೆದ 2 ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿದೆ. ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಕೂಡ ಮರಳುಗಾರಿಕೆಗೆ ಅವಕಾಶ ನೀಡಬೇಕೆಂದು ಉಡುಪಿಗೆ ಭೇಟಿ ನೀಡಿದ ಸಂದರ್ಭ ತಿಳಿಸಿದ್ದರು. ಆದರೆ, ಜಿಲ್ಲಾಡಳಿತ ಲೋಕಸಭೆ ಉಪ ಚುನಾವಣೆಯ ನೀತಿ ಸಂಹಿತೆಯ ಕಾರಣವನ್ನು ನೀಡಿ ಅನುಮತಿ ನೀಡಿಲ್ಲ. ಈ ಹಿನ್ನೆಲೆ ಮುಷ್ಕರ ನಡೆಸಲಾಗುತ್ತಿದ್ದು, ಉಡುಪಿ ಜಿಲ್ಲಾ ಕಟ್ಟಡ ಸಾಮಾಗ್ರಿ, ಲಾರಿ ಹಾಗೂ ಟೆಂಪೋ ಮಾಲಕರ ಸಂಘ ಸಭೆ ನಡೆಸಿ ಮುಷ್ಕರ ನಡೆಸುತ್ತಿದೆ.
ಮರಳುಗಾರಿಕೆ ಆರಂಭಿಸುವಂತೆ ಜಿಲ್ಲೆಯಲ್ಲಿ ವ್ಯಾಪಕ ಕೂಗುಗಳು ಕೇಳಿ ಬರುತ್ತಿವೆ. ಆದ್ರೆ ಜಿಲ್ಲಾಡಳಿತ ಇನ್ನೂ ಮರಳುಗಾರಿಕೆ ಆರಂಭಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮರಳಿಗಾಗಿ ಹೋರಾಟದ ಕಿಚ್ಚು ಉಡುಪಿ ಜಿಲ್ಲೆಯಲ್ಲಿ ಶುರುವಾಗಿದೆ.