ಮಂಗಳೂರು, ಜು 30 (DaijiworldNews/MS):ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದ್ದು ದೇಶದಲ್ಲಿ ಒಟ್ಟಾರೆಯಾಗಿ ಕೇರಳದಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟನಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ-ಮಂಗಳೂರು ಗಡಿಯಲ್ಲಿ ಹೆಚ್ಚಿನ ಅಲರ್ಟ್ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಾಜ್ಯ ಗಡಿ ಭಾಗದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಕುರಿತು ಪರಿಶೀಲಿಸಲು ಜುಲೈ 30ರ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗಡಿಯಲ್ಲಿ ಕೈಗೊಳ್ಳಲಾಗಿರುವ ಕೋವಿಡ್ ತಪಾಸಣಾ ಕಾರ್ಯಗಳ ಪ್ರಕ್ರಿಯೆಗಳನ್ನು ಕುಲಂಕುಶವಾಗಿ ಪರಿಶೀಲಿಸಿದರು. ಜೊತೆಗೆ ಕಟ್ಟುನಿಟ್ಟಿನ ತಪಾಸಣೆಗೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ , " ಕೇರಳ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣ ಕಟ್ಟುನಿಟ್ಟಿನ ತಪಾಸಣೆಗೆ ಸೂಚಿಸಲಾಗಿದೆ. ಕಾಸರಗೋಡು ಹಾಗೂ ಮಂಗಳೂರಿನ ನಡುವೆ ಉದ್ಯೋಗ, ವಿದ್ಯಾಭ್ಯಾಸ, ವಾಣಿಜ್ಯ ಚಟುವಟಿಕೆಗಳಿಗಾಗಿ ಓಡಾಟ ಅನಿವಾರ್ಯವಾಗಿದೆ. ಪ್ರಸ್ತುತ ಒಂದು ಡೋಸ್ ಕೋವಿಡ್ ಲಸಿಕೆ ಅಥವಾ ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಪ್ರವೇಶ ಕೊಡಲಾಗುತ್ತಿದೆ. ಆದರೂ ಸೋಂಕು ಪ್ರಸರಣವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರತಿನಿತ್ಯ ಸುಮಾರು 7ರಿಂದ 8 ಸಾವಿರ ಕೊರೊನಾ ಟೆಸ್ಟ್ ಮಾಡಲಾಗುತ್ತಿದ್ದು ಇದನ್ನು 10 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್, ತಹಶೀಲ್ದಾರ್ ಗುರುಪ್ರಸಾದ್, ಟಿಎಚ್ಒ ಡಾ. ಸುಜಯ್ ಭಂಡಾರಿ, ವೈದ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು