ಕಾಸರಗೋಡು, ಅ 18(SM): ಕೇರಳದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶದ ಕುರಿತಂತೆ ಕೇರಳ ಸರಕಾರದ ನಿಲುವನ್ನು ವಿರೋಧಿಸಿ ಶಬರಿಮಲೆ ಸಂರಕ್ಷಣಾ ಸಮಿತಿ ಇಂದು ಕೇರಳದಲ್ಲಿ ಬಂದ್ ಗೆ ಕರೆ ನೀಡಿದೆ. ಅದರಂತೆ ಕೇರಳದ ಬಹುತೇಕ ಎಲ್ಲಾ ಕಡೆಗಳಲ್ಲಿ ಇಂದು ಬಂದ್ ನಡೆಯುತ್ತಿದೆ.
ಕೇರಳದಲ್ಲಿ ಹರತಾಳ ನಡೆಯುತ್ತಿದ್ದು ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಿಜೆಪಿ ಕೂಡ ಹರತಾಳಕ್ಕೆ ಬೆಂಬಲ ನೀಡಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದಾರೆ. ಬಂದ್, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆ ಇರುವ ಹಿನ್ನೆಲೆ ಪೊಲೀಸರು ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಇನ್ನು ಇಂದು ಕರೆ ನೀಡಲಾಗಿರುವ ಕೇರಳ ಬಂದ್ ಗೆ ಕಾಸರಗೋಡಿನಲ್ಲೂ ಉತ್ತಮ ಸ್ಪಂಧನೆ ದೊರಕಿದ್ದು, ಜಿಲ್ಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನ ಸಂಚಾರ ವಿರಳವಾಗಿದೆ. ಬಹುತೇಕ ಕಡೆಗಳಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹರತಾಳಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.