ಕುಂದಾಪುರ, ಅ 18(SM): ಮೂರು ವರ್ಷದ ಹಿಂದೆ ಪಡೆದ ಬಡ್ಡಿ ವ್ಯವಹಾರದಲ್ಲಿ ಚಕ್ರಬಡ್ಡಿ ಕೇಳಿದ್ದಲ್ಲದೇ, ಹಲ್ಲೆ ನಡೆಸಿದ ವಿಚಾರದಲ್ಲಿ ಆಘಾತಗೊಂಡ ವ್ಯಕ್ತಿಯೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಾಮೇಶ್ವರ ನಗರ ನಿವಾಸಿ ಮಹಾಬಲ ಜೋಷಿ ಎಂಬುವರ ಮಗ ರಾಘವೇಂದ್ರ ಜೋಷಿ(35) ಎಂದು ಗುರುತಿಸಲಾಗಿದೆ.
ರಾಘವೇಂದ್ರ ಜೋಷಿ ಹೈನುಗಾರಿಕೆ ನಡೆಸುತ್ತಿದ್ದು, ಮೂರು ವರ್ಷಗಳ ಹಿಂದೆ ತೆಕ್ಕಟ್ಟೆ ಸಮೀಪದ ಸುಜಯ್ ಶೆಟ್ಟಿ ಎಂಬುವರಿಂದ ೨೦ ಲಕ್ಷ ರೂಪಾಯಿಗಳನ್ನು ಬಡ್ಡಿಗೆ ಪಡೆದಿದ್ದರು. ಪ್ರತೀ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಂತೆ ಹಣವನ್ನು ಪಾವತಿಸುತ್ತಿದ್ದು ಸುಮಾರು ೩೦ ಲಕ್ಷ ರೂಪಾಯಿಗೂ ಮೀರಿ ಹಣ ಪಾವತಿ ಮಾಡಿದ್ದಾರೆ. ಆದರೆ ಕಳೆದ ೫ ತಿಂಗಳಿನಿಂದ ಹಣ ನೀಡಲು ಸಾಧ್ಯವಾಗಿರಲಿಲ್ಲ.
ಅಕ್ಟೋಬರ್ ೧೫ರ ಸೋಮವಾರ ಸಂಜೆ ಬಡ್ಡಿ ವ್ಯವಹಾರದ ಬ್ರೋಕರ್ ಆಗಿರುವ ಮುಳ್ಳಿಕಟ್ಟೆ ನಿವಾಸಿ ರಾಮಕೃಷ್ಣ ಪೈ ಅವರ ಮನೆಗೆ ರಾಘವೇಂದ್ರ ಜೋಷಿಯನ್ನು ಬರಹೇಳಲಾಗಿತ್ತು. ರಾಘವೇಂದ್ರ ಹಾಗೂ ಆತನ ಸಹೋದರ ರತ್ನಾಕರ ಅಲ್ಲಿಗೆ ಹೋಗುತ್ತಿದ್ದಂತೆ ಸುಜಯ್ ಶೆಟ್ಟಿ ಹಾಗೂ ಆತನ ಜೊತೆಗಿದ್ದ ಏಳು ಜನರ ತಂಡ ಹಲ್ಲೆ ನಡೆಸಿತ್ತು. ಕೊನೆಗೆ ಮಾತುಕತೆ ನಡೆಸಿ ಉಳಿದ ಅಸಲು ಹಣವನ್ನು ಕೊಡುವಂತೆ ತಾಕೀತು ಮಾಡಿದ್ದರು. ಅದರಂತೆ ಒಪ್ಪಿಕೊಂಡು ಮನೆಗೆ ಬಂದಿದ್ದ ರಾಘವೇಂದ್ರ ಜೋಷಿಗೆ ಮನೆಯವರು ರಾತ್ರಿ ಹನ್ನೊಂದು ಗಂಟೆಯವರೆಗೂ ಸಮಾಧಾನಪಡಿಸಿದ್ದರು.
ಬಳಿಕ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಆಘಾತಗೊಂಡಿದ್ದ ರಾಘವೇಂದ್ರ ಜೋಷಿ ಘಟನೆಯನ್ನೆಲ್ಲಾವನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಮಂಗಳವಾರ ಬೆಳಗ್ಗೆ ಅಸ್ವಸ್ಥಗೊಂಡಿದ್ದ ರಾಘವೇಂದ್ರರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.