ಮಂಗಳೂರು, ಜು 28 (DaijiworldNews/PY): ತೃತೀಯ ಲಿಂಗಿಗಳ ಎರಡು ಬಣಗಳ ನಡುವೆ ಒಳಜಗಳ ನಡೆದಿರುವ ಹಿನ್ನೆಲೆ ಪೊಲೀಸ್ ಕಮೀಷನರಿಗೆ ಮನವಿ ಸಲ್ಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಜುಲೈ 26ರಂದು ರಾತ್ರಿ ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಪ್ರದೇಶದಲ್ಲಿ ಇರುವ ರೈಲ್ವೇ ಗೇಟ್ ಬಳಿ ತೃತೀಯ ಲಿಂಗಿಗಳ ಎರಡು ಬಣಗಳ ನಡುವೆ ಸಂಗರ್ಷ ನಡೆದಿದ್ದು, ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಗಂಗಾವತಿ, ಕೊಪ್ಪಳ, ಬಳ್ಳಾರಿ ಭಾಗದಿಂದ ನಾವು ಬಂದಿದ್ದು, ಸುಮಾರು 15 ವರ್ಷಗಳಿಂದ ಮಂಗಳೂರಿನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದೇವೆ ಎಂದು ಒಂದು ಗುಂಪಿನ ತೃತೀಯ ಲಿಂಗಿಗಳು ಹೇಳಿದ್ದಾರೆ. ಇನ್ನೊಂದು ಗುಂಪು, ನಾವು ಮೂಲತಃ ಮಂಗಳೂರಿನವರು. ನಾವು ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ. ಹಾಗಾಗಿ ಇಲ್ಲಿ ನಾವು ಇರಬೇಕು. ನೀವು ಬೇರೆ ಕಡೆಯಿಂದ ಬಂದವರು. ನೀವು ವಾಪಾಸ್ಸು ಹೋಗಿ. ನಿಮ್ಮಿಂದ ನಮಗೆ ಹೆಚ್ಚು ಭಿಕ್ಷೆ ಸಿಗುತ್ತಿಲ್ಲ ಎಂದು ಗಲಾಟೆ ಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಪ್ರಕರಣ ಬಗ್ಗೆ ತನಿಖೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.