ಕುಂದಾಪುರ,ಜು 28 (DaijiworldNews/MS): ಕಾರು ಢಿಕ್ಕಿಯಾಗಿ ಸೈಕಲ್ ಸವಾರರೋರ್ವರು ಮೃತಪಟ್ಟ ಘಟನೆ ಹೆಮ್ಮಾಡಿ ಹಾಗೂ ತಲ್ಲೂರು ನಡುವಿನ ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜು.28 ಬುಧವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಸ್ಥಳೀಯ ಸಂತೋಷ್ ನಗರದ ನಿವಾಸಿ ರಾಮ ಕುಲಾಲ್(52) ಎಂದು ಗುರುತಿಸಲಾಗಿದೆ. ರಾಮ ಕುಲಾಲ್ ಅವರು ಹೆಮ್ಮಾಡಿಯಿಂದ ತಮ್ಮ ಸೈಕಲ್ ನಲ್ಲಿ ತಲ್ಲೂರಿಗೆ ತೆರಳುತ್ತಿರುವ ಹೊತ್ತಿಗೆ ಈ ಅಪಘಾತ ನಡೆದಿದೆ. ಸೈಕಲ್ ಡಿವೈಡರ್ ಬದಿಯಿಂದ ರಸ್ತೆಯ ಎಡಗಡೆಗೆ ತಿರುಗಿಸಿದ ಪರಿಣಾಮ ಬೈಂದೂರು ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಕಾರು ಸೈಕಲ್ ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸೈಕಲ್ನಲ್ಲಿದ್ದ ರಾಮ ಕುಲಾಲ್ ಅವರು ಕೆಲ ದೂರ ಹೋಗಿ ಬಿದ್ದ ಪರಿಣಾಮ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಗಂಗೊಳ್ಳಿಯ ಆಪತ್ಬಾಂಧವ ಆಂಬುಲೆನ್ಸ್ನ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ
. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ