ಕುಂದಾಪುರ, ಅ 17 (MSP): ಉಗ್ರ ಸಂಘಟನೆಯ ಬೆದರಿಕೆಯಿಂದ ಅ.15 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಕೋಟೇಶ್ವರ ಗ್ರಾಮದ ಮಾರ್ಕೋಡಿನ ಯುವಕ ವಿವೇಕ್ ಮೊಗವೀರ ಸಾವಿನ ಪ್ರಕರಣ ಇದೀಗ ಹಲವು ಸಂಶಯಗಳಿಗೆ ಎಡೆ ಮಾಡಿದೆ.
ವಿವೇಕ್ ಸಾವಿಗೂ ಮುನ್ನ ಬರೆದಿಟ್ಟ 3 ಪುಟಗಳ ಡೆತ್ ನೋಟ್ ಈಗ ಹಲವು ಸಂಶಯಗಳಿಗೆ ಕಾರಣವಾಗಿದೆ. ಈ ಡೆತ್ ನೋಟನಲ್ಲಿ ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣವಾಗಿದ್ದು, ಮನೆ-ಮಂದಿಗೂ ಆ ಸಂಘಟನೆಯಿಂದ ಅಪಾಯವಿದೆ.ಈ ಹಿಂದೆ ಅವರಿಂದ ನನಗೆ ಕೊಲೆ ಬೆದರಿಕೆಯಿತ್ತು. ಎರಡು ವರ್ಷದ ಹಿಂದೆ ಆಕಸ್ಮಿಕವಾಗಿ ಪರಿಚಯವಾದ ಸಂಘಟನೆ ಅದಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅವರ ಅಸ್ತಿತ್ವವಿದೆ. ಮೊಬೈಲ್ ಬಳಸದ ಆ ಸಂಘಟನೆ ಬಗ್ಗೆ ಅನುಮಾನ ಬಂದು ಹಲವು ಮಾಹಿತಿ ಕಲೆ ಹಾಕಿದ್ದು ಅದು ಅವರಿಗೆ ತಿಳಿದು ತನಗೆ ಕೊಲೆ ಬೆದರಿಕೆ ಹಾಕಿದ್ದರು. ಇದಲ್ಲದೆ ಅವರಿಗೆ ರಾಜಕೀಯ ಬೆಂಬಲವೂ ಇದೆ. ನಾನು ಸಂಗ್ರಹಿಸಿದ ದಾಖಲೆಗಳು, ಪೊಲೀಸರಿಗೆ, ಮಾಧ್ಯಮಕ್ಕೆ ನೀಡುವ ಸಿದ್ದತೆಯಲ್ಲಿದ್ದು, ಅವುಗಳಿದ್ದ ಮೊಬೈಲ್ ಆಗಸ್ಟ್ ತಿಂಗಳಿನಲ್ಲಿ ಕಳೆದುಹೋಗಿದೆ.ಇನ್ನೊಂದು ಮೆಮೊರಿ ಚಿಪ್ನಲ್ಲಿ ಒಂದಷ್ಟು ದಾಖಲೆಗಳಿದ್ದು ಆ ಚಿಪ್ ಕೂಡ ಸಿಕ್ಕಿಲ್ಲ. ತನಗೆ ಅವರು ಬಹಳಷ್ಟು ಹಿಂಸೆ ನೀಡಿದ್ದು, ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಇವರಿಂದ ನನ್ನ ಮನೆಯವರನ್ನು ಉಳಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹವನ್ನು ದಾನ ಮಾಡಿ. ಮನೆಯವರು ಒಪ್ಪದಿದ್ದಲ್ಲಿ ಕಣ್ಣು ದಾನವಾದರೂ ಮಾಡಿ. ದೇಹವನ್ನು ಅಗ್ನಿಸ್ಪರ್ಷ ಮಾಡುವ ಬದಲು ಮನೆಯ ತೋಟದಲ್ಲಿ ಹೂಳಿರಿ ಇದು ನನ್ನ ಕೊನೆಯಾಸೆ. ಜಾತಿ, ಹಣ, ಅಹಂಕಾರ, ರಾಜಕೀಯ, ಸ್ವಾರ್ಥ, ಅಧಿಕಾರ ಬಿಟ್ಟು ಎಲ್ಲರೂ ಮನುಷ್ಯರಾಗಿ ಬದುಕಿ ದೇಶವನ್ನು ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂಬ ವಾಕ್ಯದೊಂದಿಗೆ ಡೆತ್ ನೋಟ್ ಮುಗಿಸಿದ್ದಾನೆ. ಇದಲ್ಲದೆ ಉಗ್ರ ಸಂಘಟನೆ ದೇವಸ್ಥಾನದಲ್ಲಿ ಕಳವು , ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಾರೆಂದು ಬರೆದಿದ್ದು, ಓರ್ವನ ಹೆಸರನ್ನು ಸಹ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ .
ಇನ್ನು ಆತ್ಮಹತ್ಯೆ ಮಾಡಿದ ವಿವೇಕ್ ಅವರ ಇಚ್ಚೆಯಂತೆಯೇ ಅಂತ್ಯವಿಧಿಗಳನ್ನು ಪೂರೈಸಿದ್ದು, ಮಗನನ್ನು ಕಳೆದುಕೊಂಡ ಹೆತ್ತವರು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ಮತ್ತೊಂದೆಡೆ ಮೂರು ಪುಟಗಳ ಡೆತ್ನೋಟ್ ನಲ್ಲಿರುವ ವಿಚಾರದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜ್ಯ ತನಿಖಾ ದಳ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದು, ಈತ ಡೆತ್ ನೋಟಿನಲ್ಲಿ ಉಲ್ಲೇಖಿಸಿರುವಂತೆ ಸಿಐಎಂಎಸ್ ಹೆಸರಿನ ಉಗ್ರಗಾಮಿ ಸಂಘಟನೆ ಕುರಿತಂತೆ ನಾನಾ ಆಯಾಮಗಳಿಂದ ಮಾಹಿತಿ ಕಲೆ ಹಾಕುವ ಯತ್ನ ನಡೆಸಲಾಗುತ್ತಿದೆ. ಈವರೆಗೆ ಈ ಹೆಸರಿನ ಸಂಘಟನೆ ಕುರಿತಂತೆ ಯಾಉದೇ ಮಾಹಿತಿ ಲಭ್ಯವಾಗಿಲ್ಲ.ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನಲೆಯಲ್ಲಿ ಗಂಭೀರ ತನಿಖೆ ನಡೆಸಲಾಗುತ್ತಿದೆ.
ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದೇವೆ. ಆತನ ಗೆಳೆಯರು, ಸಂಬಂಧಿಕರು ಮನೆಯವರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇದರ ಜೊತೆ ತಜ್ಞರನ್ನು ಭೇಟಿ ಮಾಡಿದ್ದೇವೆ. ಪತ್ರದ ಬಗ್ಗೆ ಕೂಡ ಕೂಲಂಕುಶ ತನಿಖೆ, ವೈದ್ಯರ ಅಭಿಪ್ರಾಯ ಪಡೆಯಲಾಗುವುದು ಅಂತ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.