ತಿರುವನಂತಪುರ,ಅ 17 (MSP): ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಇದೇ ಮೊದಲ ಬಾರಿಗೆ ಬುಧವಾರ ಶಬರಿ ಮಲೆ ಅಯ್ಯಪ್ಪ ದೇವಸ್ಥಾನದ ಮಾಸಿಕ ದರ್ಶನ ಬುಧವಾರ ಸಂಜೆ ಐದು ಗಂಟೆಗೆ ಪ್ರಾರಂಭವಾಗಲಿದೆ. ಆದರೆ ಪ್ರತಿಭಟನಾಕಾರರ ತೀವ್ರ ವಿರೋಧದಿಂದ ದೇಗುಲಕ್ಕೆ ಪ್ರವೇಶಿಸುವ ಪ್ರಮುಖ ಮಾರ್ಗವಾಗಿರುವ ನಿಲಕ್ಕಲ್ನಲ್ಲಿ ಬುಧವಾರ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ತಡೆಯನ್ನುಂಟು ಮಾಡಿದ್ದ ಪ್ರತಿಭಟನಕಾರರನ್ನು ಪೊಲೀಸರು ಸ್ಥಳದಿಂದ ಚದುರಿಸುತ್ತಿದ್ದಾರೆ. ಶಬರಿಮಲೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಪ್ರದೇಶವಾದ ನಿಲಕ್ಕಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆದಂತೆ ಖಾಕಿ ಪಡೆ ಕಾವಲು ಕಾಯುತ್ತಿದೆ. ಈ ನಡುವೆ ಅಯ್ಯಪ್ಪ ದೇಗುಲಕ್ಕೆ ಸ್ತ್ರೀ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿ ಅಲ್ಲಲ್ಲಿ ತಾತ್ಕಾಲಿಕ ಶಿಬಿರಗಳನ್ನು, ಟೆಂಟ್ ಗಳನ್ನು ನಿರ್ಮಾಣ ಮಾಡಿದ್ದು ಇವೆಲ್ಲವನ್ನು ಪೊಲೀಸರು ಕಿತ್ತುಹಾಕಿದ್ದಾರೆ.
ಇಂದು ಬೆಳಗ್ಗೆ ಶಬರಿ ಮಲೆಗೆ ತೆರಳುತ್ತಿದ್ದ ಬಸ್ವೊಂದನ್ನು ಹೋಗದಂತೆ ಅಡ್ಡಪಡಿಸಿದ್ದ ಪ್ರತಿಭಟನಾಕಾರರು ಪೊಲೀಸರು ಚದುರಿಸಿದ್ದಾರೆ. ದೇಗುಲ ಪ್ರವೇಶಕ್ಕೆ ಎಲ್ಲರಿಗೂ ಅವಕಾಶವಿದ್ದು, ಇದಕ್ಕೆ ಅಡ್ಡಿಪಡಿಸಲು ಯಾರನ್ನು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಪ್ರತಿಭಟನಕಾರರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ನಿಲಕ್ಕಲ್ ಪ್ರದೇಶವನ್ನು ಇದೀಗ ಪೊಲೀಸರು ಸಂಪೂರ್ಣ ಹತೋಟಿಗೆ ಪಡೆದುಕೊಂಡಿದ್ದು, ಸ್ತ್ರೀಯರ ಪ್ರವೇಶಕ್ಕೆ ತಡೆಯಲು ಪ್ರಯತ್ನಿಸುತ್ತಿದ್ದ ಹಲವು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.