ಮೂಡುಬಿದಿರೆ,ಅ 17 (MSP): ಮೂಡಬಿದಿರೆಯಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದ್ದು ಮೇಲ್ನೋಟಕ್ಕೆ ನೋಡಿದರೆ ಗಟ್ಟಿಯಾದ ನೆಲದಂತೆ ಕಂಡು ಬರುವ ಭೂಮಿಯೂ ಸಾಫ್ಟ್ ಆಗಿ ಸ್ಪ್ರಿಂಗ್ ರೀತಿ ಅಲುಗಾಡುತ್ತಿದೆ. ಅಂದರೆ ಯಾರಾದರೂ ಈ ಭೂಮಿಯಲ್ಲಿ ನಿಂತಲ್ಲೇ ಹಾರಿದರೆ ಮೇಲ್ಪದರ ಸ್ಪಾಂಜ್ನಂತೆ ಒಳಗೆ ಹೋಗಿ ಮೇಲೆ ಬರುತ್ತದೆ. ಈ ಅಚ್ಚರಿ ಕಂಡುಬಂದಿದ್ದು ಮೂಡುಬಿದಿರೆ ಕಡಂದಲೆ ಗ್ರಾಮದ ಪಾಪ್ಸನ್ ಎಂಬ ಪ್ರದೇಶದ ಒಂದು ಎಕರೆ ಜಾಗದಲ್ಲಿ .
ಇದನ್ನು ಮೊದಲು ಗಮನಿಸಿದವರು ಕಡಂದಲೆ ಗ್ರಾಮದ ನಿವಾಸಿ,ವಿದ್ಯಾರ್ಥಿ ಸುಮನ್ ಶೆಟ್ಟಿ. ಇವರು ಪೋಟೋಗ್ರಾಫಿ ಯಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಪ್ರಕೃತಿಯ ಸುಂದರ ದೃಶ್ಯಗಳನ್ನು ಸೆರೆಹಿಡಿಯಲೆಂದು ಬಯಲು, ಗುಡ್ಡಗಾಡು ಪ್ರದೇಶ ಸುತ್ತುವ ಸುಮನ್ ಹಾಗೂ ಅವರ ಗೆಳೆಯರ ತಂಡ ಇತ್ತೀಚೆಗೆ ಪಾಪ್ಸನ್ ಪ್ರದೇಶಕ್ಕೆ ಬಂದಾಗ ಈ ಬೌನ್ಸಿಂಗ್ ಅಥವಾ ನೆಗೆಯುವ ಭೂಮಿ ಬೆಳಕಿಗೆ ಬಂದಿದೆ. ಇಲ್ಲಿ ನೆಲದ ಮೇಲೆ ನಡೆಯುವಾಗ ಸ್ಪ್ರಿಂಗ್ ಮೇಲೆ ನಡೆದ, ನೀರಿನ ಅಲೆ ಮೇಲೆ ನಡೆದಂತಹ ಅನುಭವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ಸುಮನ್ . ಈ ಪ್ರದೇಶದಲ್ಲಿ ಜಿಗಿದರೆ ಭೂಮಿಯ ಮೇಲ್ಮೈ ಯಲ್ಲಿ ನೀರಿನ ಅಲೆಗಳಂತೆ ಭೂಮಿ ಕುಲುಕುತ್ತದೆ. ಅಷ್ಟು ಮೃದುವಾಗಿದೆ ಇಲ್ಲಿನ ಭೂಮಿ. ಈ ಅಚ್ಚರಿ ಇದೀಗ ಗ್ರಾಮಸ್ಥರ ಕುತೂಹಲ ಕೆರಳಿಸಿದೆ.
ಭೂಮಿಯ ಮೇಲ್ಪದರ ವಾಟರ್ ಬೆಡ್ ರೀತಿಯಲ್ಲಿ ವರ್ತಿಸಲು ಕಾರಣ ಭೂಮಿಯ ಒಳಗಿನ ಅನಿಲ ಹೊರಗೆ ಬಂದು ಭೂಪದರ ಮೇಲೆ ಬಂದಾಗ ಈ ರೀತಿಯಾಗುತ್ತದೆ. ಈ ರೀತಿಯ ಭೂಮಿ ಸೈಬೀರಿಯಾದಲ್ಲಿ ಅಪರೂಪಕ್ಕೆ ಕಂಡುಬರುತ್ತದೆ. ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಈ ರೀತಿ ಕಂಡು ಬಂದಿದ್ದು. ಕೆಲವೊಮ್ಮೆ ಭೂಮಿಯ ಮಣ್ಣಿನ ಆಳದಲ್ಲಿ ಕೆಲವೊಮ್ಮೆ ನಿರ್ವಾತ ಪ್ರದೇಶಗಳು ಉಂಟಾಗುತ್ತವೆ, ಅದರ ಮೇಲೆ ಮಣ್ಣು, ಎಲೆ ಇತ್ಯಾದಿ ಸೇರಿ ಈ ರೀತಿಯ ವಿದ್ಯಮಾನ ಕಂಡುಬರುತ್ತದೆಎನ್ನುತ್ತಾರೆ ಮಂಗಳೂರು ವಿವಿಯ ಭೂಗರ್ಭಶಾಸ್ತ್ರಜ್ಞರಾದ ಡಾ.ಗಂಗಾಧರ ಭಟ್.