ಮಂಗಳೂರು, ಜು 27 (DaijiworldNews/MS): ಯೋಗ ಮಾಡುವ ಸಂದರ್ಭ ಬಿದ್ದು ತಲೆಗೆ ಏಟಾಗಿ ಯೆನಪೋಯ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ಗೆ (80) ಮಂಗಳವಾರ ನಸುಕಿನ ಜಾವ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಆಸ್ಕರ್ ಫರ್ನಾಂಡಿಸ್ರ ತಲೆಯ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮೆದುಳಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವುದನ್ನು ತೆಗೆಯಲಾಗಿದೆ. ಕಳೆದ ಒಂದು ವಾರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಅವರಿಗೆ ಡಾ. ದಿವಾಕರ್ ರಾವ್, ಡಾ ಸುನಿಲ್ ಶೆಟ್ಟಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ರಕ್ತ ಹೆಪ್ಪುಗಟ್ಟಿರುವುದನ್ನು ತೆಗೆಯಲಾಗಿರುವುದರಿಂದ ಅವರಿಗೆ ಶೀಘ್ರ ಪ್ರಜ್ಞೆ ಮರಳುವ ನಿರೀಕ್ಷೆ ಇದೆ.
ಭಾನುವಾರ ಬೆಳಗ್ಗೆ ಯೋಗ ಮಾಡುವ ಸಂದರ್ಭ ಆಸ್ಕರ್ ಫರ್ನಾಂಡಿಸ್ ಅವರು ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರು. ಯಾವುದೇ ಗಾಯವಾಗಿಲ್ಲವೆಂದು ಇದನ್ನು ನಿರ್ಲಕ್ಷಿಸಿದ್ದರು. ಅದೇ ದಿನ ಸಂಜೆ ಡಯಾಲಿಸಿಸ್ಗೆಂದು ಯೆನೆಪೊಯ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಪರೀಕ್ಷಿಸಿದಾಗ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಕರ್ ಫರ್ನಾಂಡಿಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.