ಬಂಟ್ವಾಳ, ಅ 16(SM): ತಾಲುಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಸೋಮವಾರ ತಡರಾತ್ರಿ ನಾಡದೋಣಿಗಳ ಸಹಾಯದಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗೂ ಸುಮಾರು ಅಂದಾಜು 12 ಲಕ್ಷ ರೂಪಾಯಿ ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಟ್ವಾಳ ಎಎಸ್ಪಿ ಸೊನಾವಣೆ ಋಷಿಕೇಷ್ ಭಗವಾನ್ ನೇತೃತ್ವದ ಪೊಲೀಸರ ತಂಡ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಬಂಟ್ವಾಳ ಎಸ್ಪಿ, ಗ್ರಾಮಾಂತರ ಠಾಣಾಧಿಕಾರಿಯವರ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ 2 ನಾಡ ದೊಣಿಗಳ ಸಹಾಯದಿಂದ ಮರಳುಗಾರಿಕೆ ನಡೆಸಿ ದಡದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಮರಳನ್ನು ಲೋಡು ಮಾಡುತ್ತಿದ್ದರು. ಪೊಲೀಸ್ ವಾಹನವನ್ನು ಕಂಡು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸ್ಥಳದಲ್ಲಿ ಟಿಪ್ಪರ್ ಲಾರಿ, 2 ದೋಣಿಗಳು, ದೋಣಿ ಚಲಾಯಿಸಲು ಬಳಸುವ 2 ಪೆಟ್ರೊಲ್ ಇಂಜಿನ್ ಹಾಗೂ ಪ್ರತಿ ದೊಣಿಯಲ್ಲಿ ಸುಮಾರು 2 ಟಿಪ್ಪರ್ ಲೋಡಿನಷ್ಟು ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 11,72,500 ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಪ್ರಸನ್ನ ಎಮ್.ಎಸ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.