ಕುಂದಾಪುರ, ಜು 26 (DaijiworldNews/MS): ಕಾರಿನಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದಯುವಕರನ್ನು ಪ್ರಶ್ನಿಸಿದ ಪೊಲೀಸ್ ಮೇಲೆಯೇ ಕಾರು ಚಾಲಕ ಹಲ್ಲೆ ನಡೆಸಿದ ಘಟನೆ ಜು. 25 ರ ಭಾನುವಾರ ಶಂಕರನಾರಾಯಣ ಪೊಲೀಸ್ ಠಾಣೆಯ ಎದುರುಗಡೆ ರಾಜ್ಯ ರಸ್ತೆಯಲ್ಲಿ ನಡೆದಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿರುವ ವಿಲ್ಪೇಡ್ ಡಿ’ಸೋಜಾ (50) ಅವರು ಕೋವಿಡ್ -19 ಮಾರ್ಗಸೂಚಿಯಂತೆ ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮಾಸ್ಕ ಧರಿಸದೇ ತಿರುಗಾಟ ಮಾಡುವವರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ KA-19-MD-9794 ನೋಂದಣಿಯ ಕಾರಿನಲ್ಲಿ 4 ಜನ ಪ್ರಯಾಣ ಮಾಡುತ್ತಿದ್ದನ್ನು ನೋಡಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಮಾಸ್ಕ್ ಧರಿಸದೆ ಪ್ರಯಾಣ ಮಾಡುತ್ತಿದ್ದ ಬಗ್ಗೆ ವಿಚಾರಿಸುತ್ತಿರುವಾಗ ಕಾರಿನ ಚಾಲಕ ಆರೋಪಿ ಇದಿನಬ್ಬ ಸಾಹೀದ್ ಕಾರಿನಿಂದ ಇಳಿದು ಬಂದು ಹೆಡ್ ಕಾನ್ಸಟೇಬಲ್ ವಿಲ್ಪೇಡ್ ಡಿ’ಸೋಜಾ ಮೈ ಮೇಲೆ ಎರಗಿ ಕೈಯಿಂದ ಬೆನ್ನಿಗೆ ಹಾಗೂ ಕಪಾಲಕ್ಕೆ ಹೊಡೆದು ಹಲ್ಲೆಮಾಡಿ ಸಮವಸ್ತ್ರವನ್ನು ಹರಿದು ಹಾಕಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾನೆ. ಹಲ್ಲೆಯಿಂದಾಗಿ ನೋವುಂಟಾಗಿದ್ದು, ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2021 ಕಲಂ: 332,353 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.