ಮಂಗಳೂರು, ಜು 25 (DaijiworldNews/PY): "ಸ್ವಾಭಾವಿಕವಾಗಿ ನಮ್ಮಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ಮುಖ್ಯಮಂತ್ರಿಗಳು ಪಕ್ಷವನ್ನು ಮಾತೃ ಸಮಾನವಾಗಿ ನೋಡಿಕೊಂಡು ಪಕ್ಷದ ಹಿರಿಯರ ಸೂಚನೆ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ" ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಕರ್ ಅವರ ಆರೋಗ್ಯ ವಿಚಾರಿಸಿದರು.
ಈ ವೇಳೆ ಆಸ್ಕರ್ ಅವರ ಕುಟುಂಬಿಕರ ಜೊತೆ ಮಾತನಾಡಿ ಧೈರ್ಯ ತುಂಬಿದ ಅವರು, "ಆಸ್ಕರ್ ಅವರು ಕೊಂಕಣ್ ರೈಲ್ವೆ ಹೆದ್ದಾರಿ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಗೆ ಕಾರಣಕರ್ತರು. ಒಂದು ಆದರ್ಶ ಹಾಗೂ ವಿಶ್ವಾಸಾರ್ಹ ರಾಜಕಾರಣಿಗಳಲ್ಲಿ ಆಸ್ಕರ್ ಒಬ್ಬರು. ಬಹಳ ಸಾತ್ವಿಕ ಹಾಗೂ ಸಜ್ಜನರಾಗಿರೋ ಅವರ ಬಗ್ಗೆ ವ್ಯಕ್ತಿಗತ ಗೌರವವಿದ. ಅವರು ಅನಾರೋಗ್ಯಕ್ಕೆ ತುತ್ತಾಗಿರೋದು ಬಹಳ ನೋವು ತಂದಿದೆ. ಅವರು ಬಹುಬೇಗನೇ ಗುಣಮುಖರಾಗಿ ಬರಲಿ, ಮತ್ತೆ ನಮ್ಮ ಜೊತೆ ಹೆಜ್ಜೆ ಇಡಲಿ" ಎಂದಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನಮ್ಮಲ್ಲಿ ಸ್ವಾಭಾವಿಕವಾಗಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ಮುಖ್ಯಮಂತ್ರಿಗಳು ಪಕ್ಷವನ್ನು ಮಾತೃ ಸಮಾನವಾಗಿ ನೋಡಿಕೊಂಡು ಪಕ್ಷದ ಹಿರಿಯರ ಸೂಚನೆ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದು ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಬಲ್ಲ ಕಾರ್ಯಕರ್ತನ ಮಾತು. ಕಾಲಕಾಲಕ್ಕೆ ಹೈಕಮಾಂಡ್ನಿಂದ ಬರುವ ಸೂಚನೆ ಪಾಲಿಸುವುದಾಗಿ ಹೇಳಿದ್ದಾರೆ. ಮುಂದಿನದ್ದನ್ನು ಸಿಎಂ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹೆಸರು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರಾದರೂ ಏನಾದರೂ ಹೇಳಬಾರದು ಅನ್ನೋದು ಏನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಗೌರವಿಸಬೇಕಿದೆ. ಸಾಮಾನ್ಯ ಕಾರ್ಯಕರ್ತನಾಗಿ ನನ್ನಂಥವರು ಪಕ್ಷದ ಹಿರಿಯರು ಹೇಳಿದ್ದನ್ನು ಕೇಳುತ್ತೇವೆ. ಯಾರೂ ಏನೇ ಹೇಳಿದರೂ ಪ್ರಜಾಪ್ರಭುತ್ವದಲ್ಲಿ ಗೌರವಿಸುತ್ತೇನೆ" ಎಂದು ತಿಳಿಸಿದ್ದಾರೆ.