ಬಂಟ್ವಾಳ, ಅ 16(SM): ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಒರ್ವನನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪ ನಡು ನಿವಾಸಿ ಸೋಡಾ ಆದಮ್ ಅವರ ಪುತ್ರ ಅಜೀಜ್(23) ಬಂಧಿತ ಆರೋಪಿ.
ಆರೋಪಿಯನ್ನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗುಡ್ಡೆ ಅಂಗಡಿಯ ಶಾರದ ಸರ್ವೀಸ್ ಸ್ಟೇಷನ್ ನ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಪೋಲೀಸರು ಬಂಧಿಸಿದ್ದಾರೆ.
ಆ.11 ರಂದು ರಾತ್ರಿ ಸರ್ವೀಸ್ ಸ್ಟೇಷನ್ ನಿಂದ ಬೈಕ್ ಕಳವಾಗಿದ್ದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಬೆಳಿಗ್ಗೆ ಬಿ.ಸಿ.ರೋಡಿನ ಭಂಡಾರಿ ಬೆಟ್ಟು ಎಂಬಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಸಂಶಯದ ಮೇಲೆ ಅಜೀಜ್ ನನ್ನು ವಿಚಾರಣೆ ನಡೆಸಿದಾಗ ಈತ ಬೈಕ್ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈತನ ವಿರುದ್ಧ ಈ ಹಿಂದೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಎಸ್.ಪಿ. ರವಿಕಾಂತೇಗೌಡ ಮತ್ತು ಬಂಟ್ವಾಳ ಎ.ಎಸ್.ಪಿ.ಋಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ. ನಿರ್ದೇಶನ ದಲ್ಲಿ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ ಹಾಗೂ ಅಪರಾಧ ವಿಭಾಗದ ಎಸ್.ಐ. ಹರೀಶ್ ಅವರ ನೇತೃತ್ವದಲ್ಲಿ ಎ.ಎಸ್.ಐ.ಸಂಜೀವ , ಸಿಬ್ಬಂದಿ ಗಳಾದ ಸುರೇಶ್ ಪಡಾರ್, ಜಮೀರ್, ಕುಮಾರ್ ಎಚ್.ಕೆ, ಮಲಿಕ್ , ಕರೀಂ ಹಾಗೂ ಚಾಲಕ ವಿಜಯ ಕಾರ್ಯಾಚರಣೆ ನಡೆಸಿದ್ದರು.