ಕಾರ್ಕಳ, ಜು.25 (DaijiworldNews/HR): ಈಡಿಗ ಸಂಘಟನೆಯೇ ನಮ್ಮ ಗುರಿಯಾಗಿದೆ. ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ತತ್ವ ಸಿದ್ಧಾಂತಗಳು ಜನಮಾನಸದಲ್ಲಿ ಸರ್ವಕಾಲಿಕವಾಗಿ ಉಳಿಯಲಿ. ಅರ್ಪಣಾ ಭಾವಣೆಯಿಂದ ಸೇವೆ ಸಲ್ಲಿಸಿದಾಗ ಸಮುದಾಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಈಡಿಗ ಸಮುದಾಯದ ಶಿಕ್ಷಣ, ಉದ್ಯೋಗದಂತಹ ಸೌಲಭ್ಯಕ್ಕೆ ಕಾರ್ಯಯೋಜನೆ ರೂಪಿಸಲಾಗುವುದು ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪೀಠದ ನಿಯೋಜಿತ ಪೀಠಾಧಿಪತಿ ಕಾರ್ಕಳ ಬಲ್ಯೊಟ್ಟು ಶ್ರೀ ವಿಖ್ಯಾತನಂದ ಅಭಿಮತ ವ್ಯಕ್ತಪಡಿಸಿದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಆಶ್ರಯದಲ್ಲಿ ಮಾಗಡಿ ತಾಲೂಕಿನ ಸೋಲೂರಿನ ರೇಣುಕಾ ಯಲ್ಲಮ್ಮದೇವಿ ಶ್ರೀ ಕ್ಷೇತ್ರ ಸಮೀಪದ ಬ್ರಹ್ಮ ಶ್ರೀ ನಾರಾಯಣ ಗುರು ಪೀಠಕ್ಕೆ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಅಖಂಡ ಕರ್ನಾಟಕದಲ್ಲಿ ನೆಲೆಸಿರುವ ಈಡಿಗ ಸಮುದಾಯದವರು ಆಯಾ ಪ್ರದೇಶವಾರು ವಿವಿಧ ಒಳ ಪಂಗಡಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಮುದಾಯದ 26 ಒಳಪಂಗಡಗಳನ್ನು ಸಂಘಟಿಸಿ ಎಲ್ಲರ ವಿಶ್ವಾಸದೊಂದಿಗೆ ಸಂವಿಧಾನ ಬದ್ಧವಾದ ಸವಲತ್ತು ದೊರಕಿಸಿಕೊಡಲು ಪ್ರಮಾಣಿಕ ಪ್ರಯತ್ನಕ್ಕೆ ಮುಂದಾಗುವುದಾಗಿ ಆಶ್ವಾಸನೆ ನೀಡಿದರು.
ಈ ನಿಟ್ಟಿನಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಈಡಿಗ ಸಮುದಾಯದ ಎಲ್ಲರನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಅವರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಯೋಜನೆಯನ್ನು ರೂಪಿಸಲಾಗುತ್ತದೆ. ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಹೊಣೆಗಾರಿಕೆಯಾಗಿದೆ. ಶಿಕ್ಷಣದಿಂದ ಸ್ವಾಲಂಭಿ ಬದುಕಿಗೆ ಬುನಾದಿಯಾಗಿದೆ. ಅದರ ಕುರಿತು ಜನಜಾಗೃತಿ ಮೂಡಿಸಲಾಗುದೆಂದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಮಾತನಾಡಿ, "ಮುಂದಿನ ವರ್ಷ ಫೇ.2ರಂದು ವಿಖ್ಯಾತನಂದ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ ನಡೆಯಲಾಗುವುದು" ಎಂದರು.
ಶಾಸಕ ಹಾಗೂ ಸರಕಾರದ ಮುಖ್ಯಸಚೇತಕ ವಿ.ಸುನೀಲ್ಕುಮಾರ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಎಚ್.ಆರ್.ಗವಿಯಪ್ಪ, ಮಾಜಿ ಶಾಸಕರಾ ಕೆ.ಡಿ.ನಾಯ್ಕ, ಸ್ವಾಮಿರಾವ್, ಬೇಳೂರು ಗೋಪಾಲಕೃಷ್ಣ ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ಎಂ.ವೇದಕುಮಾರ್, ಕೆಪಿಎಸ್ಸಿ ಮಾಜಿ ಸದಸ್ಯ ಡಾ. ಲಕ್ಷ್ಮೀನರಸಿಂಹಯ್ಯ, ಟಿ.ವಾಸನ್, ಜೆ.ಪಿ.ಸುಧಾಕರ್, ಕೆ.ಎಸ್.ದುಶ್ಯಂತ್, ಹರಿಚರಣ್, ರಕ್ಷಿತ್, ಶಿವರಾಮ್, ಶಿವಕುಮಾರ್, ಚೆಲುವರಾಜ್, ಕುದೂರು ವೆಂಕಟೇಶ್, ಎಂ.ಜಿ.ಗೋಪಾಲ್, ಚಂದ್ರಶೇಖರ್ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.