ಕುಂದಾಪುರ, ಅ 16(SM): ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆಯ ನೆಂಪು ಸರ್ಕಲ್ನಲ್ಲಿ ಅ. 18ರಂದು ಸಂಜೆ ೪ಗಂಟೆಗೆ ಚುನಾವಣಾ ಪ್ರಚಾರ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವಾಗಿ ಬೈಂದೂರಿನಲ್ಲಿ ಮತಯಾಚನೆ ನಡೆಯಲಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಎಲ್ಲ ಶಾಸಕರ ಸಹಿತ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪ ಅವರಿಗೆ 47 ಸಾವಿರ ಮತಗಳ ಅಂತರವಿದ್ದರೆ, ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 25ಸಾವಿರ ಮತಗಳ ಅಂತರವಿತ್ತು. ಇದೀಗ ಈ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 50ಸಾವಿರ ಮತಗಳ ಅಂತರವನ್ನು ಬೈಂದೂರು ಒಂದೇ ಕ್ಷೇತ್ರದಲ್ಲಿ ಪಡೆಯಲಿದ್ದಾರೆ. ರಾಘವೇಂದ್ರ ಅವರು ಈ ಹಿಂದೆ ಸಂಸದರಾಗಿದ್ದಾಗ 600 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಕೇವಲ ಬೈಂದೂರು ಕ್ಷೇತ್ರಕ್ಕಾಗಿಯೇ ನೀಡಿದ್ದಾರೆ. ಜನರು ಅವರ ಈ ಜನಪರ ಕಾರ್ಯವನ್ನು ಮರೆತಿಲ್ಲ. ಆದ್ದರಿಂದ ಮತ್ತೊಮ್ಮೆ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಅಪಮೈತ್ರಿಯೊಂದಿಗೆ ಸರಕಾರ ನಡೆಸುತ್ತಿದೆ. ಆದರೆ ರೈತರ ಸಾಲಮನ್ನಾ ಇನ್ನೂ ಗೊಂದಲದಲ್ಲಿದೆ. ದೇವಸ್ಥಾನದ ಹಣವನ್ನು ನೆರೆ ಪರಿಹಾರಕ್ಕೆ ವಿನಿಯೋಗಿಸುತ್ತಿರುವುದು ಸರಿಯಲ್ಲ ಎಂದ ಅವರು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಜೆಡಿಎಸ್ಗೆ ಬೈಂದೂರಿನಲ್ಲಿ ಬೆಂಬಲವಿಲ್ಲ. ಆದ್ದರಿಂದ ರಾಘವೇಂದ್ರ ಅವರು ಅತೀ ಹೆಚ್ಚು ಮತಗಳ ಅಂತರದಿಂದ ವಿಜಯ ಸಾಧಿಸುವುದು ಖಚಿತ ಎಂದು ಹೇಳಿದರು.