ಬೆಳ್ಮಣ್ , ಅ 16 (MSP): ಭಾರೀ ಪ್ರತಿಭಟನೆಯಿಂದ ಸುದ್ದಿಯಾಗಿ ಗಮನ ಸೆಳೆದಿದ್ದ ಬೆಳ್ಮಣ್ ಟೋಲ್ ಗೇಟ್ ಸ್ಥಾಪನೆ ನಿಗದಿತ ದಿನವಾದ ಅ.15 ರಂದು ಆರಂಭವಾಗಿಲ್ಲ. ಗುತ್ತಿಗೆ ಪಡೆದುಕೊಂಡ ಮೈಸೂರಿನ ಸಂಸ್ಥೆ ಸುಂಕ ವಸೂಲಿಗೆ ಇನ್ನೂ ಪೂರ್ವ ತಯಾರಿ ನಡೆಸಿಲ್ಲ. ಈ ಹಿನ್ನಲೆಯಲ್ಲಿ ಈ ಭಾಗದ ಪ್ರತಿಭಟನೆಗೆ ಹೆದರಿ ಯೋಜನೆ ಹಿಂದೆ ಸರಿಯಿತೇ.? ಅಥವಾ ಮುಂದಿನ ದಿನದಲ್ಲಿ ಇಲ್ಲಿ ಟೋಲ್ ಗೇಟ್ ನಿರ್ಮಾಣವಾಗುತ್ತಾ ಅನ್ನುವ ಕುತೂಹಲ ಇನ್ನೂ ಈ ಭಾಗದ ಗ್ರಾಮಸ್ಥರನ್ನು ಕಾಡುತ್ತಿದೆ.
ಕೇವಲ 28 ಕಿ.ಮೀ ವ್ಯಾಪ್ತಿಯ ಈ ರಾಜ್ಯ ಹೆದ್ದಾರಿಗೆ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಕೆಆರ್ಡಿಸಿಎಲ್ನ ಜತೆ ಸುಂಕ ವಸೂಲಾತಿಯ ಬಗ್ಗೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಮೈಸೂರಿನ ಮಿತ್ರಾ ಇನ್ಪೋ ಸೊಲ್ಯೂಷನ್ ನ ಜತೆ ಒಡಂಬಡಿಕೆ ನಡೆದಿದ್ದು ಈ ಬಗ್ಗೆ ಪಂಚಾಯತ್ನ ಯಾವುದೇ ನಿರಾಪೇಕ್ಷಣ ಪತ್ರದ ಅಗತ್ಯ ಇಲ್ಲದೆ ಅ.15 ರಿಂದ ಈ ಭಾಗದ ರಾಜ್ಯ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ನಡೆಸುತ್ತಾರೆ ಅನ್ನುವ ಸುದ್ದಿ ಎಲ್ಲೆಡೆ ಹಬ್ಬಿದ್ದರೂ. ದಿನ ಬಂದರೂ ಯಾವುದೇ ಸುಂಕ ವಸೂಲಾತಿಗೆ ಗುತ್ತಿಗೆದಾರರು ಮುಂದಾಗಿಲ್ಲ.
ಯೋಜನೆ ಹಿಂದೆ ಸರಿಯಿತೇ.? : ಬೆಳ್ಮಣ್ನಲ್ಲಿ ಟೋಲ್ ಗೇಟ್ ನಿರ್ಮಾಣವಾಗುತ್ತದೆ ಎಂದು ಸುದ್ದಿ ತಿಳಿದ ಈ ಭಾಗದ ಜನರು ಹೋರಾಟ ಸಮಿತಿಯನ್ನು ರಚಿಸಿ ರಾಜಕೀಯ ರಹಿತವಾಗಿ ಹೋರಾಟಕ್ಕೆ ಮುಂದಾದರೂ ಈ ಹಿನ್ನಲೆಯಲ್ಲಿ ಅ.7 ರಂದು ಬೆಳ್ಮಣ್ನಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆದು ಸುಮಾರು ೬ಸಾವಿರಕ್ಕೂ ಅಧಿಕ ಹೋರಾಟಗಾರರು ಹೋರಾಟದಲ್ಲಿ ಭಾಗವಹಿಸಿದ್ದರು. ಆ ಬಳಿಕ ನಿರಂತರ ಟೋಲ್ ಗೇಟ್ ವಿರೋಧದ ನಿರಂತರ ಸಭೆಗಳು ಬೆಳ್ಮಣ್ ನಲ್ಲಿ ನಡೆಯುತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು, ಸಚಿವರನ್ನು, ಜಿಲ್ಲಾಧಿಕಾರಿಗಳನ್ನು, ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಟೋಲ್ ನಿರ್ಮಾಣವಾಗದಂತೆ ಮನವಿಯನ್ನು ಮಾಡಲಾಗಿದೆ. ಹಾಗೂ ಕಾನೂನಿ ರೀತಿಯಲ್ಲಿಯೂ ಹೋರಾಟಕ್ಕೆ ಹೋರಾಟ ಸಮಿತಿ ಮುಂದಾಗಿದ್ದು ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ-1 ರಲ್ಲಿ ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣವಾಗದಂತೆ ಸಭೆಗಳು ನಿರಂತರ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಪ್ರತಿಭಟನೆಯ ಬಿಸಿಯಿಂದ ಟೋಲ್ ನಿರ್ಮಾಣದ ಯೋಜನೆ ಹಿಂದೆ ಸರಿಯಿತೇ..? ಅಥವ ಪ್ರತಿಭಟನೆ ತಣ್ಣಗಾಗುವ ವರೆಗೆ ಗುತ್ತಿಗೆದಾರರು ಕಾದು ಕುಳಿತ್ತಿದ್ದರೋ ಅನ್ನುವ ಅನುಮಾನ ಕಾಡುತ್ತಿದೆ.
ಗ್ರಾ.ಪಂ. ಪತ್ರ ನೀಡಿತ್ತು : ಟೋಲ್ ಸಂಗ್ರಹದ ಗುತ್ತಿಗೆಯನ್ನು ಪಡೆದುಕೊಂಡ ಮೈಸೂರಿನ ಮಿತ್ರ ಇನ್ಫಾ ಸೊಲ್ಯೂಶನ್ ಸ್ಥಳೀಯ ಬೆಳ್ಮಣ್ ಗ್ರಾಮ ಪಂಚಾಯತಿಗೆ ಸುಂಕ ಪಾವತಿ ಕೇಂದ್ರ ಆರಂಭಿಸುವ ಬಗ್ಗೆ ಪತ್ರವನ್ನು ನೀಡಿದೆ . ಈ ಪತ್ರದಲ್ಲಿ ಉಲ್ಲೇಖವಾಗಿರುವಂತೆ ಕರ್ನಾಟಕ ಸರ್ಕಾರ ಆದೇಶದಂತೆ ಕರ್ನಾಟಕ ರಸ್ತೆ ಅಭಿವೃದ್ದಿ ನಿಯಮಿತ ನಮ್ಮ ಸಂಸ್ಥೆಗೆ ರಾಜ್ಯ ಹೆದ್ದಾರಿ -1 ಪಡುಬಿದ್ರೆ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್ ಗ್ರಾಮದಲ್ಲಿ 15-10-2018 ರಿಂದ ಶುಲ್ಕ ಸಂಗ್ರಹಿಸಲು ಗುತ್ತಿಗೆ ಮಾಡಿಕೊಂಡಿರುತ್ತಾರೆ. ಆ ಪ್ರಯುಕ್ತ ನಾವು ತಮ್ಮ ಗ್ರಾಮ ಪಂಚಾಯತಿ ಬಳಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ-1 ರಲ್ಲಿ ಸುಂಕ ಪಾವತಿ ಕೇಂದ್ರ ನಿರ್ಮಾಣ ಮಾಡುತ್ತಿರುವುದಾಗಿ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ ಎನ್ನುವ ಪತ್ರವನ್ನು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ನೀಡಿದೆ.
ಗುತ್ತಿಗೆ ಸಂಸ್ಥೆಯ ಮಾತು : ಸ್ಥಳೀಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಟೋಲ್ ವಸೂಲಾತಿ ಪ್ರಾರಂಭಗೊಂಡಿಲ್ಲ, ಸ್ಥಳೀಯರ ವಿರೋಧದ ಬಗ್ಗೆ ಕೆಆರ್ಡಿಸಿಎಲ್ ಸರಕಾರದ ಗಮನಕ್ಕೆ ತಂದಿದ್ದು ಸರಕಾರ ಜಿಲ್ಲಾಧಿಕಾರಿಗಳಿಗೆ ಮುಂದಿನ ದಿನದಲ್ಲಿ ಶಾಸಕರಾದಿಯಾಗಿ ಇತರ ಪ್ರಮುಖರ ಸಭೆ ಕರೆಯಲು ಸೂಚನೆ ನೀಡಿದ್ದು ಬಳಿಕ ಅಂತಿಮ ತೀರ್ಮಾನ ನಡೆಸಲು ತಿಳಿಸಿದೆ ಎಂದು ಮಿತ್ರ ಸಂಸ್ಥೆಯ ಯೋಜನಾಧಿಕಾರಿ ತಿಳಿದ್ದಾರೆ.