ಉಡುಪಿ, ಜು 24 (DaijiworldNews/PY): 13ನೇ ವಯಸ್ಸಿನ ರಿಷಬ್ ಮಾರ್ಷಲ್ ಆರ್ಟ್ಸ್ ಕರಾಟೆಯಲ್ಲಿ 56 ಪದಕಗಳನ್ನು ಗಳಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ 2021ರಲ್ಲಿ ಇತ್ತೀಚೆಗೆ ದಾಖಲೆ ಸಾಧನೆ ಮಾಡಿದ್ದಾನೆ.
ಆತ ತನ್ನ ಎಳೆಯ ವಯಸ್ಸಿನಲ್ಲಿ ಮಾಡಿರೋ ಸಾಧನೆಗೆ ಇಡೀ ಏಷ್ಯಾ ಖಂಡ ನಿಬ್ಬೆರಗಾಗಿದೆ. ಅವನ ಪೋಷಕರು ಮೂಲ ಉಡುಪಿಯವರಾಗಿದ್ದು, ನೆಲಿಸಿರೋದು ಮುಂಬೈಯಲ್ಲಿ. ಕೊರೊನಾ ಲಾಕ್ ಡೌನ್ ಸಂಪೂರ್ಣ ಸದುಪಯೋಗಪಡಿಸಿದ ರಿಷಬ್, ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಅರಳಿಸಿದ್ದಾನೆ.
ಉಡುಪಿ ಜಿಲ್ಲೆಯ ದೊಂಡೇರಂಗಡಿ ಮೂಲದ ರಿಷಬ್ ಶೆಟ್ಟಿ ಮಾರ್ಷಲ್ ಆರ್ಟ್ಸ್ನಲ್ಲಿ ವಿಶಿಷ್ಟ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ರಿಷಬ್ ತನ್ನ ಹದಿಮೂರನೇ ವಯಸ್ಸಿಗೆ ದೇಶ ಮೆಚ್ಚುವ ಕೆಲಸ ಮಾಡಿದ್ದಾನೆ.
ರಿಷಬ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ದೊಂಡೇರಂಗಡಿಯ ವಿಮಲಾ ಮತ್ತು ಅರುಣ್ ಶೆಟ್ಟಿ ದಂಪತಿಯ ಪುತ್ರ. ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ 2021 ಸಾಧನೆಯನ್ನು ಮಾಡಿದ್ದಾನೆ. ಎದುರಾಳಿಗಳನ್ನು ಕೆಲವೇ ಕ್ಷಣಗಳಲ್ಲಿ ಸೋಲಿಸುವ ಚಾಕಚಕ್ಯತೆ ರಿಷಬ್ಗಿದೆ.
ರಿಷಬ್ ಶೆಟ್ಟಿ ಮಾತನಾಡಿ, "ನನಗೆ ಚಿಕ್ಕಂದಿನಿಂದಲೇ ಕರಾಟೆ ಮೇಲೆ ಆಸಕ್ತಿ. ತಂದೆ ತಾಯಿ ಬಹಳ ಪ್ರೋತ್ಸಾಹ ಮಾಡಿದ್ದಾರೆ. ನನ್ನ ಗುರುಗಳಾದ ವಿನೋದ್ ಪದವು ಕೂಡಾ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಮುಂದೆ ಇಂಟರ್ ನ್ಯಾಶನಲ್ ಲೆವೆಲ್ ಕಾಂಪಿಟೇಶನ್ ಹೋಗಬೇಕು ಎಂಬ ಆಸೆಯಿದೆ" ಎಂದರು.
"ಎರಡು ವರ್ಷ ಲಾಕ್ಡೌನ್ ಸಂದರ್ಭವನ್ನು ರಿಷಬ್ ಸದುಪಯೋಗಪಡಿಸಿಕೊಂಡಿದ್ದು, ದಿನಪೂರ್ತಿ ಕರಾಟೆ ಅಭ್ಯಾಸವನ್ನು ಮಾಡುತ್ತಿದ್ದ. ಮಾರ್ಷಲ್ ಆರ್ಟ್ಸ್ನ ವೀಡಿಯೋಗಳನ್ನು ನೋಡೋದು. ತಮ್ಮ ಶಿಕ್ಷಕರ ಜೊತೆ ಅದನ್ನು ಪ್ರ್ಯಾಕ್ಟೀಸ್ ಮಾಡುವುದು. ಶೈಕ್ಷಣಿಕ ಬೆಳವಣಿಗೆಯ ನಿರಂತರ ಶ್ರಮವಹಿಸಿದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ" ಎಂದು ಕುಟುಂಬಸ್ಥರು, ಊರಿನ ಗ್ರಾಮಸ್ಥರು ರಿಷಬ್ ಸಾಧನೆಗೆ ಶುಭ ಹಾರೈಸಿದ್ದಾರೆ.
ದೀಕ್ಷಿತ್ ದೊಂಡೇರಂಗಡಿ ಮಾತಮಾಡಿ, "ರಿಷಬ್ ನಮ್ಮ ಊರಿನ ಹೆಮ್ಮೆ. ಏಷ್ಯಾ ಬುಕ್ ರೆಕಾರ್ಡ್ ಮಾಡಿರುವುದು ಸಣ್ಣ ಸಾಧನೆ ಅಲ್ಲ. ನಮ್ಮ ಊರಿನ ಹುಡುಗ ಎಂದು ಹೇಳಲು ಹೆಮ್ಮೆ" ಎಂದರು.
ಈಗ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ಗಳಿಗೆ ಪೂರ್ವ ತಯಾರಿಗಳನ್ನು ಮಾಡುತ್ತಿದ್ದಾನೆ. ರಿಷಬ್ ಶೆಟ್ಟಿ ಮತ್ತಷ್ಟು ಪದಕ ಪಡೆದುಕೊಳ್ಳಲಿ ಎನ್ನುವುದು ಹಿತೈಷಿಗಳ ಹಾರೈಕೆ.