ಉಡುಪಿ, ಜು.24 (DaijiworldNews/HR): ಗ್ರಾಮೀಣ ಪರಿಸರದ ಬಡ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ಗುರಿಯೊಂದಿಗೆ ಅಂಗನವಾಡಿ ಕೇಂದ್ರಗಳಿಗೆ ಮಾತೃಪೂರ್ಣ ಯೋಜನೆಯಡಿಯಲ್ಲಿ ರಾಜ್ಯ ಸರಕಾರ ಕೊಡಮಾಡುತ್ತಿದ್ದ ಮೊಟ್ಟೆ ಸರಬರಾಜು ಟೆಂಡರ್ ಪ್ರಕ್ರಿಯೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹಸ್ತಕ್ಷೇಪ ನಡೆಸಲು ಒಪ್ಪಿಕೊಂಡು, ಮಾಸಿಕ ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಟಿವಿ ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ ಗೊಂಡಿದ್ದು, ಆ ನೆಲೆಯಲ್ಲಿ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸೂಕ್ತ ತನಿಕೆಗೆ ಅವಕಾಶ ಮಾಡಿಕೊಡ ಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, "ರಕ್ಷಣಾ ಇಲಾಖೆಯ ಟೆಂಡರ್ ಪ್ರಕ್ರಿಯೆಯೊಂದರಲ್ಲಿ ಸಮತಾ ಪಕ್ಷದ ಜಯಾ ಜೆಟ್ಲಿ ಹಸ್ತಕ್ಷೇಪವನ್ನು ಗುರಿಯಾಗಿರಿಸಿ, 2001ರಲ್ಲಿ ಅಂದಿನ ಪ್ರಧಾನಿ ದಿ. ವಾಜಪೇಯಿ ಸರಕಾರದ ಆಡಳಿತಾವದಿಯಲ್ಲಿ ನಡೆದ ಟೆಹಲ್ಕಾ ಕುಟುಕು ಕಾರ್ಯಾಚರಣೆಯನ್ನೇ ಮಾನದಂಡವನ್ನಾಗಿರಿಸಿ, ಈ ಹಗರಣದ ಸೂಕ್ತ ತನಿಕೆ ಆಗಬೇಕು. ಬಡಮಕ್ಕಳ ಮತ್ತು ಮಹಿಳೆಯರ ಅನ್ನಕ್ಕೆ ಕನ್ನ ಹಾಕುವವರಿಗೆ ಸರಿಯಾದ ಶಿಕ್ಷೆ ಆಗಬೇಕು" ಎಂದಿದ್ದಾರೆ.
ಇನ್ನು "ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಆಡಳಿತದ ಅವದಿಯಲ್ಲಿ ಜಾರಿಗೆ ಬಂದಿದ್ದ ಈ ಜನಪರ ಯೋಜನೆಯಡಿಯಲ್ಲಿ ಅಂಗನವಾಡಿಗಳ ಮೂಲಕ ಹಾಲಿನೊಂದಿಗೆ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಅಂದು ವಿರೋಧ ಪಕ್ಷವಾಗಿದ್ದ ಬಿಜೆಪಿ ಧರ್ಮದ ನೆಲೆಗಟ್ಟಿನಲ್ಲಿ ಇದನ್ನು ವಿರೋಧಿಸುತ್ತ ಬಂದಿತ್ತು. ಇಂದು ಅದೇ ಪಕ್ಷದ ಸಚಿವೆಯೊಬ್ಬರು ಅದೇ ಮೊಟ್ಟೆಯಲ್ಲಿ ಹಣ ದೋಚಲು ನೋಡಿ, ಭ್ರಷ್ಠಾಚಾರಕ್ಕೆ ಕೈ ಚಾಚಿ, ಯೋಜನೆ ಯನ್ನು ಕುಲಗೆಡಿಸುತ್ತಿರುವುದು , ಸರಕಾರದ ಜನಪರ ಚಿಂತನೆಯ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.