ಕುಂದಾಪುರ,ಅ 16 (MSP): ಉಗ್ರಗಾಮಿ ಸಂಘಟನೆಯೊಂದರಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಮಾರ್ಕೋಡು ಎಂಬಲ್ಲಿ ಅ. ೧೫ ರ ಸೋಮವಾರ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಮಾರ್ಕೋಡು ನಿವಾಸಿ ಗೋವಿಂದ ಮೊಗವೀರ ಹಾಗೂ ಕಾವೇರಿ ಎಂಬುವರ ಹಿರಿಯ ಮಗ ವಿವೇಕ್ ಮೊಗವೀರ (23) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಯ ಸಂದರ್ಭ ಆತ ಬರೆದಿಟ್ಟಿರುವ ಡೆತ್ನೋಟ್ ಮೂಲಕ ಉಗ್ರಗಾಮಿ ಸಂಘಟನೆಯ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ.
ವಿವೇಕ್ ಕೆಲವು ಸಮಯಗಳ ಹಿಂದೆ ಬೆಂಗಳೂರಿನ ರಿಲಾಯನ್ಸ್ ಪೌಂಡೆಷನ್ ಎನ್ನುವ ಸಂಸ್ಥೆಯ ಕೃಷಿ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ನಂತರದ ದಿನಗಳಲ್ಲಿ ಆತ ಕೆಲಸ ತೊರೆದು ಮನೆಗೆ ಮರಳಿದ್ದ ಎನ್ನಲಾಗಿದೆ. ಆದರೆ ಈ ಬಗ್ಗೆ ಮನೆಯವರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಸೋಮವಾರ ಸಂಜೆ ಬೆಂಗಳೂರಿಗೆ ಹೋಗಲಿರುವುದರಿಂದ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದ ವಿವೇಕ್ ರೂಮಿನೊಳಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅತೀ ಬಡತನದ ಕುಟುಂಬದಲ್ಲಿರುವ ಕುಟುಂಬಕ್ಕೆ ಹಿರಿಯ ಪುತ್ರನಾಗಿ ವಿವೇಕ್ ಆಸರೆಯಾಗಬೇಕಿದ್ದ. ಆದರೆ ಕೆಲವು ವರ್ಷಗಳ ಹಿಂದೆ ಉಗ್ರಗಾಮಿ ಸಂಘಟನೆಯೊಂದರ ಪರಿಚಯವಾಗಿದ್ದು, ಕೊನೆಗೆ ಅಲ್ಲಿಯ ವಿವರಗಳು ದೊರೆತ ಬಳಿಕ ವಿಚಲಿತಗೊಂಡು ಸಂಘಟನೆಯಿಂದ ಹೊರಬಂದಿದ್ದ ಎನ್ನಲಾಗಿದೆ. ಆದರೆ ಇದರಿಂದಾಗಿ ಸಂಘಟನೆಯ ಪ್ರಮುಖರು ಮತ್ತೆ ಸಂಘಟನೆಗೆ ಸೇರದಿದ್ದರೆ ಕೊಲೆ ಮಾಡುವುದಾಗಿಯೂ, ಕುಟುಂಬವನ್ನೇ ನಾಶ ಮಾಡುವುದಾಗಿಯೂ ಬೆದರಿಸಿರುವುದಾಗಿ ಆತ ಡೆತ್ನೋಟಿನಲ್ಲಿ ತಿಳಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ. ಆದರೆ ಡೆತ್ನೋಟಿನಲ್ಲಿ ಸ್ಪಷ್ಟವಾಗಿ ಏನು ಬರೆಯಲಾಗಿದೆ ಎನ್ನುವುದನ್ನು ಪೊಲೀಸರು ಇದುವರೆಗೂ ಮಾಹಿತಿ ಹೊರಹಾಕಿಲ್ಲ. ಆದರೆ ದೇಹವನ್ನು ಸುಡದಿರಿ. ಅಂಗಾಂಗಳನ್ನು ದಾನ ಮಾಡಿ ಎಂದೂ ಬರೆದಿರುವುದಾಗಿ ತಿಳಿದು ಬಂದಿದೆ. ಕುಂದಾಪುರ ಸರ್ಕಾರೀ ಆಸ್ಪತ್ರೆಯೆಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಂದಾಪುರ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.