ಮಂಗಳೂರು,ಅ 16 (MSP): ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕುದ್ರೋಳಿಯಲ್ಲಿ ಕಸಾಯಿಖಾನೆಯ ಅಭಿವೃದ್ದಿಯ ಪ್ರಸ್ತಾಪನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ.ಖಾದರ್ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಅ. 16 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಚಿವ ಖಾದರ್ , ಸ್ವಚ್ಛ ಮಂಗಳೂರು ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿಯಲ್ಲಿ ಕಸಾಯಿಖಾನೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪದ ಕುರಿತು ಮಾಡಿರುವ ವಿರೋಧ ಹಾಗೂ ಹೇಳಿಕೆಗಳಿಂದ ನೋವಾಗಿದೆ.ಸ್ಮಾರ್ಟ್ ಸಿಟಿ ಯೋಜನೆ ಮೂಲ ಉದ್ದೇಶ ಸ್ವಚ್ಚತೆ. ಕಸಾಯಿಖಾನೆಯಲ್ಲಿ ಹೈಜೀನ್ ಇರಬೇಕೆನ್ನುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆ ಕಮಿಟಿ ಮುಂದೆ ಕಸಾಯಿಖಾನೆಗೆ ಅನುದಾನ ನೀಡಲು ಸಲಹೆ ನೀಡಿದ್ದೆ. ಅದು ಕಮಿಟಿಯಲ್ಲಿ ಅಂಗೀಕಾರಗೊಂಡು ಇದೀಗ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಅನುಮತಿಗೆ ರವಾನೆಯಾಗಿದೆ. ಆದರೆ ಕಸಾಯಿಖಾನೆ ಅಭಿವೃದ್ದಿ ವಿಚಾರವನ್ನೇ ಗುರಿಯಾಗಿಸಿ, ಸತ್ಯಾಂಶ ತಿಳಿಯದೆ ಬಿಜೆಪಿ ಮತ್ತು ಇತರ ಸಂಘಟನೆಗಳು ಪ್ರತಿಭಟಿಸುತ್ತಿರುವುರಿಂದ ತೀವ್ರ ಬೇಸರವಾಗಿದೆ ಎಂದಿದ್ದಾರೆ.
ಜನರಿಗೆ ಸ್ವಚ್ಚ ಆಹಾರ ದೊರಕುವ ದೃಷ್ಟಿಯಲ್ಲಿ ನಾನು ಸಲಹೆ ನೀಡಿದ್ದೆ ಅಷ್ಟೇ. ಕಸಾಯಿಖಾನೆ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗಬೇಕಾಗಿದೆ. ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳ ಮೂಲಕ ಸಾರ್ವಜನಿಕ ಮದ್ಯೆ ಗೊಂದಲ ಸೃಷ್ಟಿಸುವುದು ಬೇಡ. ಹೀಗಾಗಿ ನಾನು ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದು, ಅದರಲ್ಲಿ ಕಸಾಯಿಖಾನೆಗೆ ಸಂಬಂಧಿತ ವಿಚಾರವನ್ನು ಸಮಗ್ರವಾಗಿ ಪ್ರಸ್ತಾಪಿಸಿ ಸ್ಪಷ್ಟನೆ ನೀಡಲಿದ್ದೇನೆ. ಇದಕ್ಕೆ ಅನುಮತಿ ನೀಡುವ ಬಗ್ಗೆ ಕೇಂದ್ರ ಸರಕಾರವೇ ನಿರ್ಧರಿಸಲಿ ಎಂದರು.
ಇದಲ್ಲದೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಗೈಡ್ ಲೈನ್ಸ್ ನಲ್ಲಿ ಗೋಶಾಲೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಆದರೂ ಕೂಡಾ ಪತ್ರದಲ್ಲಿ ಗೋಶಾಲೆಗೆ ಅನುದಾನ ನೀಡುವ ವಿಚಾರವನ್ನು ಕೂಡಾ ಸವಿಸ್ತಾರವಾಗಿ ಪ್ರಸ್ತಾಪಿಸಲಿದ್ದೇನೆ ಎಂದರು.