ಕುಂದಾಪುರ, ಜು 23 (DaijiworldNews/PY): "ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ 20 ವರ್ಷಗಳನ್ನು ಪೂರೈಸಿ 21ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವರ್ಷ ಮಣಿಪಾಲ್ ಕಾರ್ಡ್ ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ಇನ್ನಷ್ಟು ವಿಶೇಷ ಸೌಲಭ್ಯ ಯೋಜನೆಯಲ್ಲಿ ಒಳಗೊಂಡಿದೆ. ಈಗಾಗಲೇ 2021ರ ನೋಂದಣಿ ಆರಂಭವಾಗಿದ್ದು, ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಸದಸ್ಯತ್ವ ಪಡೆಯಬಹುದು" ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪ ವ್ಯವಸ್ಥಾಪಕ ಕೃಷ್ಣ ಪ್ರಸಾದ್ ಹೇಳಿದರು.
ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಯೋಜನೆಯಲ್ಲಿ 1 ವರ್ಷದ ಸದಸ್ಯತ್ವವು ಒಬ್ಬರಿಗೆ ರೂ.300, ಕೌಟುಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರೂ.600, ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ-ತಾಯಿ, ಅತ್ತೆ ಮಾವ) ರೂ.750. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರೂ.500, ಕುಟುಂಬಕ್ಕೆ ರೂ.800, ಕುಟುಂಬ ಪ್ಲಸ್ ಯೋಜನೆಗೆ ರೂ.950 ಆಗುತ್ತದೆ" ಎಂದರು.
"ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಹೊರ ರೋಗಿ ವಿಭಾಗದಲ್ಲಿ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ.50 ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.30 ರಿಯಾಯತಿ ಪಡೆಯಬಹುದು. ಒಳ ರೋಗಿ ವಿಭಾಗದಲ್ಲಿ ಸಾಮಾನ್ಯ ವಾರ್ಡ್ನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ.25 ರಿಯಾಯಿತಿ ನೀಡಲಾಗುವುದು. ಸಿಟಿ, ಎಂ.ಆರ್.ಐ, ಅಲ್ಟ್ರಾಸೌಂಡ್ಗಳಲ್ಲಿ ಶೇ.20 ರಿಯಾಯತಿ, ಹೊರರೋಗಿ ವಿಭಾಗದಲ್ಲಿ ಮತ್ತು ಮಧುಮೇಹ, ಪಾದ ತಪಾಸಣೆಯಲ್ಲಿ ಶೇ.20 ರಿಯಾಯಿತಿ, ಔಷಧಾಲಯಗಳಲ್ಲಿ ಶೇ.12ರ ವರೆಗೆ ರಿಯಾಯತಿ ಇರುತ್ತದೆ. ಕೊರೊನಾ ರೋಗಿಗಳಿಗೆ ಜನರಲ್ ವಾರ್ಡ್ನಲ್ಲಿ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ ಶೇ.10 ರಿಯಾಯತಿ ದೊರೆಯುತ್ತದೆ" ಎಂದರು.
2021ರ ಮಣಿಪಾಲ ಆರೋಗ್ಯ ಕಾರ್ಡ್ನ ನೋಂದಾವಣಿಗಾಗಿ ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ ಅಥವಾ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹಿರಿಯ ವ್ಯವಸ್ಥಾಪಕ ಕೆ.ಸಚಿನ್ ಕಾರಂತ್ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅವರಿಗೆ ಮಣಿಪಾಲ್ ಕಾರ್ಡ್ ಅನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ನ ಜಾನ್ಸನ್ ಉಪಸ್ಥಿತರಿದ್ದರು.