ತಿರುವನಂತಪುರ,ಅ 16 (MSP): 800 ವರ್ಷಗಳಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿದ್ದ ಶರಿಮಲೆಯ ಅಯ್ಯಪ್ಪ ದೇವಾಲಯ ಆಡಳಿತ ಮಂಡಳಿಯ ನಿಯಮಕ್ಕೆ ವಿರೋಧವಾಗಿ , ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿ ಸೆ.28 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಇದೀಗ ಇದೇ ಶಬರಿಮಲೆಯಲ್ಲಿ ಅಯ್ಯಪ್ಪನಿಗೆ ಪೂಜೆ ಸಲ್ಲಿಸುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಲಿದ್ದಾರೆ ಅಯ್ಯಪ್ಪ ಭಕ್ತೆ ರೇಷ್ಮಾ ನಿಶಾಂತ್.
ಅಯ್ಯಪ್ಪನನ್ನು ಅತೀವ ಭಕ್ತಿ ಶೃದ್ದಯಿಂದ ನಂಬಿಕೊಂಡು ಬಂದಿರುವ ರೇಷ್ಮಾ ಮೂಲತಃ ಕೇರಳದ ಕನ್ನೂರಿನವರು. ಇವರು ಅಯ್ಯಪ್ಪನನ್ನು ಬಾಲ್ಯದಿಂದಲೇ ಪೂಜಿಸಿಕೊಂಡು ಬರುತ್ತಿದ್ದು, 2006 ರಿಂದಲೇ ಅಯ್ಯಪ್ಪನ ಮೇಲಿನ ಭಕ್ತಿಯಿಂದ ಕಟ್ಟು ನಿಟ್ಟಿನ ವ್ರತ ಆರಂಭಿಸಿದ್ದಾರೆ. ಇದೀಗ ರೇಷ್ಮಾ ಅವರಿಗೆ 32 ವರ್ಷ. ಕೇರಳದ ಖಾಸಗಿ ಕಾಲೇಜೊಂದರಲ್ಲಿ ವೃತ್ತಿಯಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಬರಿಮಲೆ ಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ತೀರ್ಪು ನೀಡುತ್ತಿದ್ದಂತೆ ಹೆಚ್ಚು ಖುಷಿ ಪಟ್ಟವರಲ್ಲಿ ರೇಷ್ಮಾ ಕೂಡಾ ಒಬ್ಬಾಕೆ. ಅಯ್ಯಪ್ಪನ ನೆಲೆಗೆ ತೆರಳಲು ಎಂದಾದರೂ ಮಹಿಳೆಯರಿಗೆ ಅವಕಾಶ ಸಿಗುತ್ತದೆ ಎಂದು ಕಾಯುತ್ತಿದ್ದ ರೇಷ್ಮಾ ಅವರ ಆಸೆ ಕೊನೆಗೂ ನೆರವೇರಿದಂತಾಗಿದೆ.
ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಬಳಿಕ 41 ದಿನಗಳ ಕಠಿಣ ವ್ರತ ಕೈಗೊಂಡ ರೇಷ್ಮಾ ಮಲಯಾಳಂನ ಕ್ಯಾಲೆಂಡರ್ ನ ವೃಶಿಕ ಮಾಸದ ನಂತರ ಶಬರಿಮಲೆಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಕಪ್ಪು ವಸ್ತ್ರ ಧರಿಸಿ, ಮಾಂಸಾಹಾರ ತ್ಯಜಿಸಿ, ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸುತ್ತ ಶಬರಿಮಲೆಗೆ ದರ್ಶನಕ್ಕೆ ಪಾಲಿಸಬೇಕಾದ ಎಲ್ಲಾ ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸಿತೊಡಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರೇಷ್ಮಾ, ಶಬರಿಮಲೆಯಲ್ಲಿ ನೆಲೆಯಾದ ಅಯ್ಯಪ್ಪನ ದರ್ಶನ ಪಡೆಯುವುದು ನನ್ನ ಬಹುದಿನಗಳ ಕನಸು. ನನ್ನ ನಿರ್ಧಾರದಿಂದ ಬಹುದೊಡ್ಡ ಕಾಂತ್ರಿಯಾಗುತ್ತದೆ ಎಂದು ನಾನು ನಂಬಿಲ್ಲ. ಆದರೆ ಒಂದಷ್ಟು ಮಹಿಳೆಯರಿಗೆ ಸ್ಫೂರ್ತಿ ಸಿಗಬಹುದೆಂದುಕೊಂಡಿದ್ದೇನೆ. ನನ್ನ ಈ ಶಬರಿಮಲೆಯ ಪ್ರಯಾಣಕ್ಕೆ ಸಾರ್ವಜನಿಕರು ಸಹಾಯ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.