ಕುಂದಾಪುರ,ಅ 16 (MSP): ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನ ಸ್ನೇಹ ಬೆಳೆಸಿ ಬಾಲಕಿಯೊಬ್ಬಳು ಮನೆಬಿಟ್ಟು ಬಂದ ಕಥೆಯಿದು. ಬೆಂಗಳೂರಿನಲ್ಲಿ ಪಿಯುಸಿ ಕಲಿಯುತ್ತಿರುವ ಬಾಲಕಿಗೆ ಫೇಸ್ ಬುಕ್ ಮೂಲಕ ಕುಂದಾಪುರ ನಗರದ ಯುವಕನೊಬ್ಬನ ಪರಿಚಯವಾಗಿದೆ. ಈ ಪರಿಚಯ ಬಳಿಕ ಪ್ರೇಮದ ಕಡೆಗೂ ಹೊರಳಿದೆ. ಯುವಕನ ಮನೆಯವರ ಜೊತೆಗೂ ಆಕೆ ಮಾತುಕತೆ ನಡೆಸುತ್ತಿದ್ದಳು.
ಎರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆಕೆ ಮನೆ ತೊರೆದು ಯುವಕನ ಮನೆ ತೊರೆದು ಯುವಕನ ಮನೆ ಸೇರಿಕೊಂಡಿದ್ದಳು. ಯುವಕನ ಮನೆಯವರು ನೀಡಿದ ಮಾಹಿತಿಯಂತೆ ಆಕೆಯ ಮನೆಯವರು ಸೋಮವಾರ ಕುಂದಾಪುರಕ್ಕೆ ಬಂದು ಯುವತಿಯ ಮನವೊಲಿಸಿ ಊರಿಗೆ ಕರೆದೊಯ್ದಿದ್ದಾರೆ. ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ. ಪ್ರಕರಣ ಸೌಹಾರ್ದವಾಗಿ ಮುಗಿದಿದೆ. ಆದರೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಆಕೆ ಈ ಹಿಂದೆ ಮನೆಯವರ ಜತೆ ಇಲ್ಲಿಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದಳು. ಆದ್ದರಿಂದ ಆಕೆಯ ಮನೆಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯುವಕನ ಮನೆಯವರು ಮಾಹಿತಿ ನೀಡುತ್ತಲೇ ಎಚ್ಚೆತ್ತುಕೊಂಡು ಪ್ರಕರಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.