ಕೋಟ, ಜು 23 (DaijiworldNews/MS): ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ಜು.12ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಗಡಿಯಲ್ಲಿ ಬಂಧಿಸಿ ಕರೆತಂದ ಆರೋಪಿ ಸ್ವಾಮಿನಾಥ ನಿಶಾದ (38)ನನ್ನು ಪೊಲೀಸರು ಗುರುವಾರ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಸ್ವಾಮಿನಾಥ ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಚಾರ್ಪನ್ ಬಹುರಾಗ್ ಗ್ರಾಮದ ನಿವಾಸಿಯಾಗಿದ್ದು ಪೊಲೀಸರು ಈತನನ್ನು ಬಂಧಿಸಿದ್ದರು.
ಪತ್ನಿ ಕೊಲೆಗೆ ಸಂಚು ರೂಪಿಸಿದ್ದ ಸೂತ್ರದಾರ ರಾಮಕೃಷ್ಣ ಗಾಣಿಗ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ಇಬ್ಬರು ಬಾಡಿಗೆ ಹಂತಕರು ಈ ಕೃತ್ಯದ ನಡೆಸಿದ್ದು ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಯ ಕುರಿತು ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಗಾಗಲೇ ಈತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಹಾಗೂ ಬಾಡಿಗೆ ಹಂತಕರು ಪರಿಚಯಿಸಿದ ವ್ಯಕ್ತಿಯನ್ನು ಕೂಡ ಪತ್ತೆ ಮಾಡಲಾಗುತ್ತಿದೆ.