ಕಾಸರಗೋಡು, ಜು.22 (DaijiworldNews/HR): ದನದ ತಿವಿತಕ್ಕೆ ಶಿಕ್ಷಕರೋರ್ವರು ಮೃತಪಟ್ಟ ದಾರುಣ ಘಟನೆ ಬುಧವಾರ ಚೆರ್ವತ್ತೂರಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಚೆರ್ವತ್ತೂರು ಬಿಆರ್ಸಿಯ ವಿಕಲಚೇತನ ವಿದ್ಯಾರ್ಥಿಗಳ ಸ್ಪೆಷಲ್ ಎಜುಕೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಿಕ್ಕೋಡಿಯ ಸಿ.ರಾಮಕೃಷ್ಣನ್ (54) ಎಂದು ಗುರುತಿಸಲಾಗಿದೆ.
ಮನೆಯ ಕೊಟ್ಟಿಗೆಯಲ್ಲಿ ದನಕ್ಕೆ ಆಹಾರ ನೀಡಲು ತೆರಳಿದ್ದ ಸಂದರ್ಭದಲ್ಲಿ ದನದ ತಿವಿತಕ್ಕೆ ಒಳಗಾಗಿದ್ದು, ಹೊಟ್ಟೆಯ ಭಾಗಕ್ಕೆ ದನದ ಕೊಂಬಿನಿಂದ ತಿವಿದ ಪರಿಣಾಮ ಗಂಭೀರ ಗಾಯಗೊಂಡ ರಾಮಕೃಷ್ಣನ್ ಅವರನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸಮಾಜ ಸೇವಕರಾಗಿದ್ದ ರಾಮಕೃಷ್ಣನ್ ಕೇರಳ ರಾಜ್ಯದುದ್ದಕ್ಕೂ ವಿಕಲ ಚೇತನ ಮಕ್ಕಳ ಕಲ್ಯಾಣಕ್ಕಾಗಿ ಸಾಕಷ್ಟು ಪ್ರಯತ್ನಿಸಿದ್ದರು. ಪರಿಸರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು.
ವಿಕಲ ಚೇತನ ವಿದ್ಯಾರ್ಥಿಗಳಿಗಾಗಿ ಕಾಸರಗೋಡಿನಲ್ಲಿ ರಾಜ್ಯ ಮಟ್ಟದ ಕಲೋತ್ಸವ ಆಯೋಜಿಸಿದ್ದರು.
ಇನ್ನು ಮೊಗ್ರಾಲ್ ಪುತ್ತೂರು ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ 17 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಲಚೇತನ ಮಕ್ಕಳ ಅಭಿವೃದ್ಧಿ ಯೋಜನೆಗಳಿಗೆ ಯತ್ನಿಸಿದ್ದರು.