ಮಂಗಳೂರು, ಜು 21 (DaijiworldNews/PY): ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಇಂದು ಆಸ್ಪತ್ರೆಗೆ ಭೇಟಿ ನೀಡಿರುವ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್ ಅವರು, "ಆಸ್ಕರ್ ಫರ್ನಾಂಡಿಸ್ ಅವರಿಗೆ ಟೆಲಿಮೆಡಿಸಿನ್ ಮೂಲತ ಅತ್ಯುತ್ತಮ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಗುವುದು" ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಜ್ಞ ವೈದ್ಯರೊಂದಿಗೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ" ಎಂದರು.
"ನಮ್ಮ ತಂದೆಯ ಸ್ವಭಾವ ಹಾಗೂ ಆಸ್ಕರ್ ಅವರ ಸ್ವಭಾವ ಒಂದೇ ಆಗಿದ್ದು, ಹಾಗಾಗಿ ನನ್ನ ಮೇಲೂ ಅವರಿಗೆ ವಿಶೇಷ ಪ್ರೀತಿ ಇತ್ತು. ಆ ಕಾರಣದಿಂದ ಈ ಸ್ಥಾನಕ್ಕೇರಲು ನೆರವಾಗಿದ್ದರು. ಅವರು ಶೀಘ್ರವೇ ಗುಣಮುಖರಾಗಲಿ. ಆಸ್ಕರ್ ಅವರು ಒಳ್ಳೆಯ ವ್ಯಕ್ತಿ" ಎಂದು ಹೇಳಿದರು.
"ಇನ್ನು ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕ ಅವರು ಸಹ ಆಸ್ಕರ್ ಫರ್ನಾಂಡೀಸ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಪೇಜಾವರ ಸ್ವಾಮೀಜಿಗಳು ಸಹ ಆಸ್ಕರ್ ಅವರ ಆರೋಗ್ಯ ವಿಚಾರಿಸಿದ್ದಾರೆ" ಎಂದರು.
ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಕೂಡಾ ಅಸ್ಪತ್ರೆಗೆ ಭೇಟಿ ನೀಡಿ ಆಸ್ಕರ್ ಅವರ ಆರೋಗ್ಯ ವಿಚಾರಿಸಿದ್ದು, ಈ ಸಂದರ್ಭ ಅವರು ಮಾಧ್ಯಮದೆದುರು ಗದ್ಗದಿತರಾದರು.
"ಆಸ್ಕರ್ ಅವರು ಶೀಘ್ರವೇ ಆರೋಗ್ಯವಾಗಿ ಬರುತ್ತಾರೆ. ದೇವರು ಅವರಿಗೆ ಸಹಾಯ ಮಾಡುತ್ತಾರೆ" ಎಂದರು.
ಜು.18 ರ ಭಾನುವಾರ ಬೆಳಗ್ಗೆ ಯೋಗ ಮಾಡುವ ವೇಳೆ ಆಸ್ಕರ್ ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದು, ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿಗೆ ಏಟು ಬಿದ್ದು ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದಾಗಿ ವೈದ್ಯರು ಹೇಳಿದ್ದಾರೆ.