ಮಂಗಳೂರು, ಅ 15 (MSP): ಬಿಜೆಪಿಗರಿಗೆ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಅರಿವಿಲ್ಲ. ಸ್ಮಾರ್ಟ್ ಸಿಟಿಯ ಮುಖ್ಯ ಉದ್ದೇಶವೇ ಸ್ವಚ್ಚತಾ ನಗರ. ಈ ಯೋಜನೆಗಳಲ್ಲಿ ಕಸಾಯಿಖಾನೆಗಳ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪವಿದೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿಗರು ಸುಳ್ಳು ಆರೋಪ ಮಾಡುತ್ತಿದ್ದು ಇದಕ್ಕೂ ಮೊದಲು ಬಿಜೆಪಿ ಸಂಸದರು, ಶಾಸಕರಿಗೆ, ಸ್ಮಾರ್ಟ್ ಸಿಟಿಯಲ್ಲಿ ಕಸಾಯಿಖಾನೆಯ ಪ್ರಸ್ತಾವನೆಯನ್ನು ತಡೆಹಿಡಿಯುವ ಅವಕಾಶ ಇದ್ದರೂ ಅವರು ಸುಮ್ಮನಿದ್ದಿದ್ದು ಯಾಕೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರಶ್ನಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅ. 15 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ದನದ ಮಾಂಸ ರಫ್ತಿನಲ್ಲಿ ಭಾರತ ಮೊದಲನೇಯ ಸ್ಥಾನದಲ್ಲಿದೆ. ಈ ಮಾಂಸ ರಫ್ತು ಮಾಡುವ ಸಂಸ್ಥೆಗಳ ಪೈಕಿ ಶೇ.75ರಷ್ಟು ಸಂಸ್ಥೆಗಳು ಒಡೆತನವನ್ನು ಬಿಜೆಪಿಗರು ಹಾಗೂ ಹಿಂದೂಗಳು ಹೊಂದಿದ್ದಾರೆ. ಇದರ ವಿರುದ್ದ ತಾಕತ್ತಿದ್ದರೆ ಸಂಘ ಪರಿವಾರದವರು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಮಿಥುನ್ ರೈ ಚಾಲೆಂಜ್ ಹಾಕಿದ್ದಾರೆ.
ಕಸಾಯಿಖಾನೆಯ ಅಭಿವೃದ್ದಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಲಹೆ ಮಾತ್ರ ನೀಡಿದ್ದಾರೆ. ಆದರೆ ಇದನ್ನೇ ನೆಪವಾಗಿಟ್ಟು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರು ಸಚಿವರನ್ನು ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾರೆ. ಲೋಕಸಭಾ ಚುನಾವಣೆಯನ್ನು ಮುಂದಿಟ್ಟು ರಾಜಕೀಯ ಉದ್ದೇಶದಿಂದ ಮಾತ್ರ ಇದನ್ನು ಇಶ್ಯೂ ಮಾಡಲಾಗುತ್ತಿದೆ ಎಂದರು. ನಿಜವಾದ ಕಾಳಜಿಯಿಂದ ಅಕ್ರಮ ಗೋ ಸಾಗಾಟ ತಡೆಯಬೇಕಿದೆ. ರಾಜಕೀಯದ ಉದ್ದೇಶದಿಂದ ಪ್ರತಿಭಟನೆ ನಡೆಸುವ ಸಂಘಟನೆಯವರಿಗೆ ನಿಜವಾದ ಕಾಳಜಿ ಇದ್ದರೆ ಗೋ ಸಾಕಾಣೆ ಮಾಡಿ ತೋರಿಸಲಿ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಮುಖಂಡರಾದ ಸಂತೋಷ್ ಶೆಟ್ಟಿ, ಗಿರೀಶ್ ಶೆಟ್ಟಿ, ಕಿರಣ್, ರಮಾನಂದ ಪೂಜಾರಿ, ನೀರಜ್ ಪಾಲ್, ಪ್ರೇಮನಾಥ್ ಮೊದಲಾದವರು ಉಪಸ್ಥಿತರಿದ್ದರು.