ಮಂಗಳೂರು, ಜು 20 (DaijiworldNews/MS): ರಾಜ್ಯ ಸಭಾ ಸದಸ್ಯ, ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಯೋಗ ಮಾಡುವ ಸಂದರ್ಭ ಜಾರಿ ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜು.18 ರ ಭಾನುವಾರ ಬೆಳಗ್ಗೆ ಯೋಗ ಮಾಡುವ ವೇಳೆ ಆಸ್ಕರ್ ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದಾರೆ. ಆದರೆ ಆ ವೇಳೆ ದೊಡ್ಡ ಪ್ರಮಾಣದಲ್ಲಿ ಗಾಯವಾಗಿಲ್ಲವೆಂದು ನಿರ್ಲಕ್ಷಿಸಿದ್ದರು. ಬಳಿಕ ಅಂದೇ ಸಂಜೆ ಮಾಮೂಲಿ ಆರೋಗ್ಯ ತಪಾಸಣೆಗೆಂದು ಅವರು ಯೆನೆಪೊಯ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ವೈದ್ಯರು ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ತಲೆಯ ಒಳಭಾಗಕ್ಕೆ ಪೆಟ್ಟಾಗಿರುವುದು ತಿಳಿದುಬಂದಿದೆ. ಮಾತ್ರವಲ್ಲದೆ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕೂಡಲೇ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ ಎಂಬುದಾಗಿ ವೈದ್ಯರು ಹೇಳಿದ್ದಾರೆ. ಸದ್ಯ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ