ಸುಬ್ರಮಣ್ಯ, ಅ 15 (MSP): ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಆರಂಭಿಸಿದ್ದ ಉಪವಾಸ ಸತ್ಯಾಗ್ರಹವನ್ನು ಮೂರು ದಿನಗಳ ಬಳಿಕ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಉಪವಾಸ ಸತ್ಯಾಗ್ರಹ ಆರಂಭಿಸಿದ 60 ಗಂಟೆಗಳ ಬಳಿಕ ಅ.15 ರ ಸೋಮವಾರ ಮಧ್ಯಾಹ್ನದಿಂದ ಶ್ರೀಗಳು ಉಪವಾಸ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು, ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಮೇಲಿನ ನಿರಂತರ ಆಕ್ರಮಣ ಮತ್ತು ಮಠದ ಗೋವುಗಳ ಸಂರಕ್ಷಣೆಗೆ ಅಡ್ಡಿಪಡಿಸುತ್ತಿರುವ ಸರ್ಕಾರ ಹಾಗೂ ಕೆಲವೊಂದು ಬುದ್ದಿಜೀವಿಗಳ ಧೋರಣೆಯಿಂದ ಮನನೊಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆ. ಆದರೆ ಇದೀಗ ಪೇಜಾವರ ಶ್ರೀಗಳು, ಸುತ್ತೂರು ಶ್ರೀಗಳು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ರೇವಣ್ಣ ಕರೆ ಮಾಡಿ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ, ಈ ನಿಟ್ಟಿನಲ್ಲಿ ಉಪವಾಸ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ಧಾರೆ.
ಕುಕ್ಕೆ ಸುಬ್ರಹ್ಮಣ್ಯದ ಆಗುಹೋಗುಗಳ ಬಗ್ಗೆ ತೀರಾ ಮನನೊಂದು ಉಪವಾಸ ಕೈಗೊಂಡು ಸಮಸ್ಯೆ ಬಗೆಹರಿಸಲು ದೇವರಲ್ಲಿ ಮೊರೆ ಹೋಗಿ ಉಪವಾಸ ಕೈಗೊಂಡಿದ್ದರು, ಆದರೆ ಇದೀಗ ಪೇಜಾವರ ಶ್ರೀ, ಸುತ್ತೂರು ಶ್ರೀಗಳು ಮತ್ತು ಮುಖ್ಯಮಂತ್ರಿಗಳ ಭರವಸೆಯ ಮೇರೆಗೆ ಉಪವಾಸ ಸತ್ಯಾಗ್ರಹ ಕೈ ಬಿಟ್ಟಿದ್ಧಾರೆ. ಇವರ ಉಪವಾಸ ಸತ್ಯಾಗ್ರಹಕ್ಕೆ ಉಡುಪಿಯ ಅಷ್ಟಮಠಾಧೀಶರು ಸೇರಿ ಹಲವು ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಕೂಡಾ ಸ್ವಾಮೀಜಿಗಳ ಪರ ಹೋರಾಟದ ಕೈಗೊಳ್ಳುವುದಾಗಿ ತಿಳಿಸಿದ್ದರು.