ಬಂಟ್ವಾಳ, ಜು.19 (DaijiworldNews/HR): ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ನೇತ್ರತ್ವದ ನಗರ ಠಾಣಾ ಪೊಲೀಸ್ ತಂಡ ಬಂಧಿಸಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಸಜಿಪಮೂಡ ಗ್ರಾಮದ ಸುಭಾಶ್ ನಗರ ನಿವಾಸಿ ಇಲಿಯಾಸ್ @ಎಲಿಯಾಸ್ (36) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯ ಕೈಯಿಂದ ಅಂದಾಜು ರೂ.30,000 ಮೌಲ್ಯದ ಗಾಂಜ, ಹಾಗೂ ರೂ.50,000 ಮೌಲ್ಯದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಎಸ್. ಐ. ಅವಿನಾಶ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ದೊರೆತ ಮಾಹಿತಿಯಂತೆ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ವ್ಯಕ್ತಿಯೋರ್ವರು ಮೋಟಾರ್ ಸೈಕಲ್ ಒಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಜಿಪಮುನ್ನೂರು ಗ್ರಾಮದ, ಕಂದೂರು ಎಂಬಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು ಈ ವೇಳೆ ಆರೋಪಿ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಮುಡಿಪುವಿನಿಂದ ಬಿಸಿರೋಡು ಕಡೆಗೆ ಮಾರಾಟದ ಉದ್ದೇಶದಿಂದ ಮಾದಕ ವಸ್ತು ಗಾಂಜವನ್ನು ಆರೋಪಿ ಇಲಿಯಾಸ್ ಕಿಸೆಯಲ್ಲಿ ಮತ್ತು ಮೋಟಾರ್ ಸೈಕಲ್ ನ ಸೀಟಿನ ಅಡಿಯ ಬಾಕ್ಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಠೆಯಲ್ಲಿಟ್ಟುಕೊಂಡಿರುವ ವಿಚಾರ ಆತ ತಿಳಿಸಿದ್ದಾನೆ.
ಈ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೃಷಿಕೇಷ್ ಭಗವಾನ್ ಸೋನಾವಣೆ, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಭಾಸ್ಕರ ಒಕ್ಕಲಿಗ ರವರ ನಿರ್ದೇಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವೆಲೈಂಟೈನ್ ಡಿಸೋಜಾರವರ ಆದೇಶದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಣಕರಾದ ಚೆಲುವರಾಜು, ಉಪನಿರೀಕ್ಷಕರಾದ ಅವಿನಾಶ್, ಏ.ಎಸ್.ಐ ಗಿರೀಶ್ ಮತ್ತು ಬಂಟ್ವಾಳ ಡಿ.ವೈ.ಎಸ್.ಪಿ ವಿಶೇಷ ತಂಡದ ಸಿಬ್ಬಂದಿಯವರಾದ ಉದಯ ರೈ, ಪ್ರವೀಣ್ ಎಂ, ಪ್ರಶಾಂತ್, ಇರ್ಷಾದ್ ಪಿ, ಗೋಣಿಬಸಪ್ಪ, ಕುಮಾರ್ ಹೆಚ್.ಕೆ ಮತ್ತು ವಿವೇಕ್, ರಾಘವೇಂದ್ರ ರವರು ಭಾಗವಹಿಸಿದ್ದಾರೆ.
ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.