ರಾಜಸ್ಥಾನ, ಅ 15 (MSP): ರಾಜಸ್ಥಾನದಲ್ಲಿ ಝಿಕಾ ವೈರಸ್ ಆತಂಕ ತಂದೊಡ್ಡಿದೆ. ದಿನದಿಂದ ದಿನಕ್ಕೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ರಾಜ್ಯವೇ ಬೆಚ್ಚಿಬಿದ್ದಿದೆ. ರಾಜಸ್ಥಾನದಲ್ಲಿ ಒಟ್ಟು 61 ಜನರಿಗೆ ಝಿಕಾ ವೈರಸ್ ಸೋಂಕು ತಗುಲಿದ ಬಗ್ಗೆ ವರದಿಯಾಗಿದೆ. ಇದರಲ್ಲಿ 11 ಮಂದಿ ಗರ್ಭಿಣಿಯರು ಸೇರಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
60 ಜನ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಇದರಲ್ಲಿ 45 ಜನರು ರೋಗಿಗಳು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ ಅಂತಾ ರಾಜಸ್ಥಾನ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಝಿಕಾ ವೈರಸ್ ಪ್ರಕರಣಗಳು ಶಾಸ್ತ್ರಿ ನಗರದಲ್ಲಿ ಅತಿ ಹೆಚ್ಚಾಗಿ ಕಂಡು ಬಂದಿದ್ದು, ಆ ಪ್ರದೇಶದಲ್ಲಿ ಝಿಕಾ ವೈರಸ್ ತಡೆಗಟ್ಟಲು ಆ್ಯಂಟಿ ಲಾರ್ವಾ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಗರ್ಭಿಣಿಯರು ಸ್ವಲ್ಪ ದಿನಗಳ ಕಾಲ ಹೊರಗಡೆ ಓಡಾಡದಿರಲು ಹಾಗೂ ಎಲ್ಲಾ ರೀತಿಯಲ್ಲೂ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇನ್ನು ಇಡೆಸ್ ಈಜಿಪ್ಟಿ ಎಂಬ ಸೊಳ್ಳೆ ಮೂಲಕ ಈ ವೈರಸ್ ಹರಡುತ್ತಿದ್ದು, ಜ್ವರ, ಚರ್ಮ ತುರಿಕೆ, ಸ್ನಾಯು ನೋವುಗಳು ಈ ಸೊಂಕಿನ ಲಕ್ಷಣಗಳಾಗಿವೆ. ಇದು ಗರ್ಭಿಣಿಯರಿಗೆ ಅಂತ್ಯಂತ ಅಪಾಯಕಾರಿಯಾಗಿದ್ದು, ಝಿಕಾ ಸೋಂಕಿನಿಂದ ಗರ್ಭಿಣಿಯರಿಗೆ ಹಾಗೂ ಗರ್ಭದಲ್ಲಿರುವ ಮಗುವಿನ ಮಿದುಳಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸೋಂಕು ತಗುಲಿದ ಮಹಿಳೆಯಿಂದ ಜನಿಸುವ ಮಗುವಿನ ತಲೆ ಆರೋಗ್ಯಕರ ಮಗುವಿಗಿಂತ ಚಿಕ್ಕದಾಗಿರುತ್ತೆ ಅಂತಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಸೋಂಕು ಪೀಡಿತಪ್ರದೇಶದಲ್ಲಿರುವ ಗರ್ಭಿಣಿಯರಿಗೆ ಬೇರೆಡೆಗೆ ಸ್ಥಳಾಂತರಿಸುವಂತೆ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ.