ಹೈದರಾಬಾದ್, ಅ 15 (MSP): ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ತೆಲಂಗಾಣದಲ್ಲಿ ಮತದಾರರನ್ನು ಸೆಳೆಯಲು ಪಕ್ಷಗಳು ವಿವಿಧ ಭರವಸೆಗಳನ್ನು ನೀಡುತ್ತಿವೆ. ಅವಧಿಗೂ ಮುನ್ನಾ ವಿಧಾನಸಭೆ ವಿಸರ್ಜಿಸಿದ್ದ ಟಿಆರ್ಎಸ್ ಸರ್ಕಾರ ಮತ್ತೆ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಹರಸಾಹಸ ಪಡುತ್ತಿದ್ದರೆ ಇತ್ತ ಕಡೆ ಬಿಜೆಪಿಯೂ ಕೂಡಾ ಮತದಾರರಿಗೆ ಹೊಸ ಹೊಸ ಭರವಸೆಗಳನ್ನು ನೀಡಿ ತನ್ನತ್ತ ಸೆಳೆಯುತ್ತಿದೆ.
ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿದ ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಪಟ್ಟಂತೆ ಎದ್ದಿರುವ ವಿವಾದಗಳಿಂದ ಇತ್ತೀಚೆಗೆ ಸದಾ ಸುದ್ದಿಯಲ್ಲಿರುವ ಶಬರಿಮಲೆಯ ವಿಚಾರದಲ್ಲಿ ಇದೀಗ ಬಿಜೆಪಿ ಮತದಾರರಿಗೆ ಆಮಿಷ ಒಡ್ಡಿದೆ.
ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚನೆಯಾದಲ್ಲಿ , ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ರಾಜ್ಯ ಸಾರಿಗೆ ಸಂಸ್ಥೆಯಿಂದ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಹಬ್ಬದ ಸಂದರ್ಭ ಧಾರ್ವಿುಕ ಸ್ಥಳಗಳಿಗೆ ಪ್ರಯಾಣಿಸುವ ಬಸ್ಗಳ ಮೇಲಿನ ರಸ್ತೆ ತೆರಿಗೆ ಕಡಿತಗೊಳಿಸಲಾಗುವುದು ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ. ಇದಲ್ಲದೆ ಬೆಳಗ್ಗೆ 10 ಗಂಟೆಗೂ ಮುನ್ನ ಮತ್ತು ಸಂಜೆ 6 ಗಂಟೆ ಮೇಲೆ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು. ವಾರಾಂತ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗುವುದು. ಶೀಘ್ರವೇ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದು ತೆಲಂಗಾಣ ರಾಜ್ಯದ ಬಿಜೆಪಿ ಮುಖಂಡ ಎನ್.ವಿ.ಎಸ್.ಎಸ್. ಪ್ರಭಾಕರ್ ಹೇಳಿದ್ದಾರೆ.