ಉಪ್ಪಿನಂಗಡಿ, ಜು 19 (DaijiworldNews/MS): ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದುಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕೊಕ್ಕಡ ನಿವಾಸಿ ರುಕ್ಮಯ ಮಡಿವಾಳ (41) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಎಂದು ದೂರಲಾಗಿದೆ.
ಈತ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ 16ರ ಹರೆಯದ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿ ಕಡೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವುದಲ್ಲದೆ, ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದು ಇದರಿಂದ ವಾಪಾಸ್ ತಂದು ಬಿಟ್ಟುದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ಬೇರೆ ಯಾರಿಗಾದರೂ ತಿಳಿಸದಂತೆ ಜೀವ ಬೆದರಿಕೆಯನ್ನು ಹಾಕಿದ್ದಾನೆಂದು ಆರೋಪಿಸಲಾಗಿದೆ.
ಬಾಲಕಿಯಿಂದ ಮಾಹಿತಿ ಪಡೆದ ಆಕೆಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.