ಬಂಟ್ವಾಳ, ಜು 18 (DaijiworldNews/PY): ಸೂಕ್ತ ಕೊರೊನಾ ಮುನ್ನೆಚ್ಚರಿಕೆ ಕೈಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಬಂಟ್ವಾಳದಲ್ಲಿ ಈ ಬಾರಿ 30 ಕೇಂದ್ರಗಳಲ್ಲಿ ಒಟ್ಟು 6156 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಸಾಂದರ್ಭಿಕ ಚಿತ್ರ
ಪರೀಕ್ಷೆಯನ್ನು ಸುಸೂತ್ರವಾಗಿ ಹಾಗೂ ಹೆಚ್ಚಿನ ಮುತುವರ್ಜಿಯಿಂದ ನಡೆಸುವ ನಿಟ್ಟಿನಲ್ಲಿ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕ ವರ್ಗ ಕೊಠಡಿ ಜೋಡಣೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳ ಸಿದ್ಧತೆಗೆ ಅಲ್ಲಿನ ಆಡಳಿತ ಮಂಡಳಿ ಕೂಡ ಸಹಕಾರ ನೀಡುತ್ತಿದೆ.
ಪ್ರತಿವರ್ಷ ಎಲ್ಲಾ 6 ವಿಷಯಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದರೆ ಈ ಬಾರಿ ಭಿನ್ನವಾಗಿ ಕೇವಲ ಎರಡು ಪರೀಕ್ಷೆಗಳು ಮಾತ್ರ ಇರುತ್ತವೆ. ಪರೀಕ್ಷೆಗಳ ಸಂಖ್ಯೆ ಕಡಿಮೆ ಇದ್ದರೂ, ಇಲಾಖೆಗೆ ಹೆಚ್ಚಿನ ಒತ್ತಡ ಇರುತ್ತದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆಯೊಂದಿಗೆ ಸ್ಯಾನಿಟೈಸರ್ ಹಾಕಿಕೊಂಡು ಬರುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವ ಸವಾಲು ಕೂಡ ಇಲಾಖೆಯ ಮುಂದಿದೆ.
ಎಷ್ಟೆಷ್ಟು ವಿದ್ಯಾರ್ಥಿಗಳು.?
ತಾಲೂಕಿನಲ್ಲಿ ಒಟ್ಟು ಪರೀಕ್ಷೆ ಬರೆಯುವ 6156 ವಿದ್ಯಾರ್ಥಿಗಳಲ್ಲಿ 3369 ಬಾಲಕರು ಹಾಗೂ 2787 ಬಾಲಕಿಯರು ಇರುತ್ತಾರೆ. 2638 ಸರಕಾರಿ ಶಾಲೆಯ ವಿದ್ಯಾರ್ಥಿಗಳು, 1716 ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಹಾಗೂ 1802 ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎರಡು ರಿಸರ್ವ್ ಸೆಂಟರ್ಗಳು:
ಪ್ರತಿ ಕೇಂದ್ರಗಳಲ್ಲಿ ಕೊರೊನಾ ನಿಯಮಾನುಸಾರ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಸಲಾಗುತ್ತಿದ್ದು, ಹೀಗಾಗಿ ಪರೀಕ್ಷಾ ಕೇಂದ್ರಗಳನ್ನು ಏರಿಕೆ ಮಾಡಲಾಗಿದೆ. ಒಟ್ಟು 30 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ತುರ್ತು ಸಂದರ್ಭಗಳಿಗಾಗಿ ಹೆಚ್ಚುವರಿ ಎರಡು ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ.
ತಾಲೂಕಿನ ಮುಡಿಪು, ಶ್ರೀರಾಮ ಕಲ್ಲಡ್ಕ ಹಾಗೂ ವಿಟ್ಲ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ 250ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದು, ಉಳಿದಂತೆ ಎಲ್ಲಾ ಕೇಂದ್ರಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ 200ಕ್ಕಿಂತ ಕಡಿಮೆ ಇದೆ. ಜತೆಗೆ ಒಂದು ಕೊಠಡಿಯಲ್ಲಿ ಗರಿಷ್ಠ 12 ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ.