ಸುಬ್ರಮಣ್ಯ,ಅ 14(MSP): ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಆರಂಭಿಸಿದ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದೆ. ಮಠದಲ್ಲಿ ಗೋ ಶಾಲೆ ಇದ್ದು ಇದಕ್ಕೆ ಬೆಟ್ಟದಿಂದ ಸಹಜವಾಗಿ ಬರುವ ನೀರನ್ನು ಯಾರಿಗೂ ತೊಂದರೆಯಾಗದಂತೆ ತರಿಸುತ್ತಿದ್ದೆವು. ಇತ್ತೀಚೆಗೆ ಕೆಲವರು ಅದೂ ನಿಲ್ಲುವಂತೆ ಮಾಡಿದ್ದಾರೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು.
ಈ ನಡುವೆ ಸುಬ್ರಹ್ಮಣ್ಯ ಸ್ವಾಮೀಜಿಯವರ ಪರವಾಗಿ ಮಾತನಾಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ , ಮುಜರಾಯಿ ಇಲಾಖೆಯ ಆಡಳಿತದಲ್ಲಿರುವ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿಗೆ ಅನ್ಯಾಯವಾದರೆ ನಾವೆಲ್ಲರೂ ಅವರ ಪರ ನಿಂತು ಹೋರಾಟ ನಡೆಸುತ್ತೇವೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಸ್ವಾಮೀಜಿಗಳು ಜನ ಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಗೋ ಶಾಲೆಗೆ ನೀರು ಬಿಡದೆ ತೊಂದರೆ ಮಾಡುತ್ತಿರುವ ಕ್ರಮ ಅಮಾನುಷವಾಗಿದೆ. ಮಠದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯವಾಗಿದೆ. ದೇವಸ್ಥಾನವೂ ಮಠಕ್ಕೆ ಸೇರಿದ್ದು ಅನ್ನೋದಕ್ಕೆ ಹಲವಾರು ದಾಖಲೆಗಳಿವೆ, ಹೀಗಿದ್ದರು ಕೂಡಾ ಸ್ವಾಮೀಜಿ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪ್ರತಿಭಟನೆಯ ಹಾದಿ ಹಿಡಿಯೋದಾಗಿ ಮುತಾಲಿಕ್ ಎಚ್ಚರಿಸಿದ್ದಾರೆ.