ಬೆಂಗಳೂರು, ಅ 14(MSP): ಪಾಠ ಮಾಡುತ್ತಿದ್ದ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳ ಮುಂದೆಯೇ ಬರ್ಬರವಾಗಿ ಇರಿದು ಹತ್ಯೆಗೈದ ಬೀಭತ್ಸ ಘಟನೆ ಅಗ್ರಹಾರ ದಾಸರಹಳ್ಳಿಯಲ್ಲಿರುವ ಹಾವನೂರು ಪಬ್ಲಿಕ್ ಸ್ಕೂಲ್ನಲ್ಲಿ ಅ.14 ರ ಭಾನುವಾರ ನಡೆದಿದೆ.
ಶಾಲೆಯಲ್ಲಿ ಅಭ್ಯಾಸಿಸುತ್ತಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಭಾನುವಾರ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಸ್ಕೂಲ್ ನ ಪ್ರಾಂಶುಪಾಲ ರಂಗನಾಥ ಅವರು ತರಗತಿಯಲ್ಲಿ ಮಕ್ಕಳಿಗೆ ಬೋಧನೆಯಲ್ಲಿ ತೊಡಗಿದ್ದರು.
ಈ ಸಂದರ್ಭ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ತರಗತಿಗೆ ನುಗ್ಗಿ ಚಾಕುವಿನಿಂದ ಏಳೆಂಟು ಬಾರಿ ಇರಿದು ಪ್ರಾಂಶುಪಾಲರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಶಾಲೆಯಲ್ಲಿ ಸೆಕ್ಯುರಿಟಿ ಗಾರ್ಡ್ ಇದ್ದರೂ ಕೂಡಾ ದುಷ್ಕರ್ಮಿಗಳು ಶಾಲೆಯ ಒಳಗೆ ಪ್ರವೇಶಿಸಿದ್ದಾರೆ.
ವಿದ್ಯಾರ್ಥಿಗಳ ಮುಂದೆಯೇ ತರಗತಿಯಲ್ಲಿ ಪ್ರಾಶಂಪಾಲರ ಕೊಲೆ ನಡೆದಿರುವುದರಿಂದ ವಿದ್ಯಾರ್ಥಿಗಳು ಭಯಗೊಂಡು ಚೀರಾಡತೊಡಗಿದ್ದಾರೆ. ಮಕ್ಕಳ ಕೂಗಾಟದ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಆ ವೇಳೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾರ್ವಜನಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮಾಗಡಿ ಠಾಣಾ ಪೊಲೀಸ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಶಾಲೆಯ ಮುಂಬಾಗದಲ್ಲಿದ್ದ ಸಿಸಿಟಿವಿ ಡಿವಿಆರ್ ನ್ನು ವಶಕ್ಕೆ ಪಡೆದಿದ್ದಾರೆ.