ಕಾಸರಗೋಡು, ಅ 14(MSP): ಬಾಲಕನೋರ್ವ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಿದೂರಿನಲ್ಲಿ ನಡೆದಿದೆ. ದಂಡೆಗೋಳಿಯ ಮಾರ್ಸೆಲ್ ಡಿಸೋಜ ಅವರ ಏಕೈಕ ಪುತ್ರ ಮೆಲ್ವಿನ್ ಡಿ ಸೋಜ (14) ಮೃತಪಟ್ಟ ಬಾಲಕ . ಶನಿವಾರ ಮಧ್ಯಾಹ್ನ ಇಬ್ಬರು ಸ್ನೇಹಿತರ ಜೊತೆ ಶಿರಿಯ ಬಜ್ಪೆ ಉಳುವಾರು ಹೊಳೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೀರುಪಾಲಾಗಿದ್ದ ಬಾಲಕನಿಗೆ ಸ್ಥಳೀಯರು , ಅಗ್ನಿಶಾಮಕ ದಳದ ಸಿಬ್ಬಂದಿಗಳು , ಪೊಲೀಸರು, ಬೆಸ್ತರು ಶೋಧ ನಡೆಸಿದ್ದು , ತಡರಾತ್ರಿ ಕುಂಬಳೆ ಸಮೀಪ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಅ.13 ರ ಶನಿವಾರ ಮಧ್ಯಾಹ್ನ ಸ್ನೇಹಿತರ ಜೊತೆಗೆ ಹೊಳೆಗೆ ಸ್ನಾನಕ್ಕೆ ತೆರಳಿದ್ದ ಮೆಲ್ವಿನ್ ಸಂಜೆಯಾದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಗಾಬರಿಗೊಂಡು ಸ್ನೇಹಿತರಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಶೋಧ ನಡೆಸಲಾಗಿತ್ತು. ಬೆಸ್ತರು ಶೋಧಕ್ಕೆ ಕೈಜೋಡಿಸಿದ್ದು ಮಧ್ಯರಾತ್ರಿ 12.30 ರ ಸುಮಾರಿಗೆ ಬೆಸ್ತರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು .
ಮೆಲ್ವಿನ್ ಶೇಣಿ ಶ್ರೀ ಶಾರದಾಂಬಾ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದನು. ಮಾರ್ಸೆಲ್ ಡಿ ಸೋಜ ಮತ್ತು ಮೆಟಿಲ್ಡಾ ದಂಪತಿಯ ಏಕೈಕ ಪುತ್ರನಾಗಿದ್ದಾನೆ.