ಮಂಗಳೂರು, ಜು. 15 (DaijiworldNews/SM): ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳದಲ್ಲಿ ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಸಾಕಷ್ಟು ಜನರು ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕಾರ್ಯಗಳಿಗೆ ಬಂದು-ಹೋಗುವುದು ಸಾಮಾನ್ಯ, ಝಿಕಾ ವೈರಸ್ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆಗಳು ನೀರಿನ ಸಿಮೆಂಟ್ ತೊಟ್ಟಿ, ಬ್ಯಾರಲ್, ಇತರೆ ನೀರಿನ ಸಂಗ್ರಹಣೆಗಳು, ಹೂವಿನ ಕುಂಡಗಳು, ಮನೆಯ ಮೇಲ್ಛಾವಣಿಗಳಲ್ಲಿ ನಿಂತ ನೀರು, ಟಯರ್, ಘನತ್ಯಾಜ್ಯಗಳಿಂದ ಉತ್ಪತ್ತಿಯಾಗುತ್ತವೆ ಎಂದರು.
ಸೊಳ್ಳೆ ಹಾಗೂ ಅದರ ಲಾರ್ವಾವನ್ನು ಮೊದಲು ನಿರ್ನಾಮ ಮಾಡಬೇಕು, ಅದಕ್ಕಾಗಿ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ಆ ಪ್ರದೇಶಗಳಲ್ಲಿ ಫಾಗಿಂಗ್ ಮಾಡಬೇಕು, ಸೊಳ್ಳೆ ಪರದೆ ಬಳಕೆ ಮಾಡಬೇಕು, ಆಸ್ಪತ್ರೆಗಳಲ್ಲಿ ಸೊಳ್ಳೆಗಳು ಬಾರದಂತಹ ವಾತಾವರಣ ನಿರ್ಮಾಣ ಹಾಗೂ ಸೊಳ್ಳೆ ಪರದೆಗಳ ಬಳಕೆ ಮಾಡಬೇಕು. ಐಎಂಎ ಹಾಗೂ ಜಿಲ್ಲೆಯ ಖಾಸಗಿ ಆಸ್ಪತೆಗಳ ಸಂಸ್ಥೆಗೆ ಈ ಬಗ್ಗೆ ತಿಳಿಸಬೇಕು. ಸೊಳ್ಳೆಗಳ ನಿಯಂತ್ರಿಸುವಿಕೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಅತಿ ಮುಖ್ಯವಾಗಿದ್ದು, ಅವರು ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.