ಮಂಗಳೂರು,ಅ 14(MSP): ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವವನ್ನು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅ.14 ರ ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸುವ ಮುಖ್ಯಮಂತ್ರಿ ದೇವರ ದರ್ಶನ ಪಡೆದು ಬಳಿಕ ದರ್ಬಾರು ಮಂಟಪದಲ್ಲಿ ನವದುರ್ಗೆ, ಶಾರದಾ ಮಾತೆಯ ವೀಕ್ಷಣೆ ಮಾಡಲಿದ್ದಾರೆ.
6.30ಕ್ಕೆ ಕ್ಷೇತ್ರದಲ್ಲಿರುವ ಸಂತೋಷಿ ಕಲಾ ಮಂಟಪದಲ್ಲಿ ನವರಾತ್ರಿ ಮಹೋತ್ಸವ ಮಂಗಳೂರು ದಸರಾ -2018 ರ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ. ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಸಂಸದರಾದ ನಳೀನ್ ಕುಮಾರ್ ಕಟೀಲ್, ಹರಿಪ್ರಸಾದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವೇದವ್ಯಾಸ್ ಕಾಮತ್ , ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ. ಹರೀಶ್ ಪೂಜಾರಿ ಮೊದಲದವರು ಉಪಸ್ಥಿತರಿರುವರು.
ಇದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಬ್ರ್ಯಾಂಡ್ ಮಂಗಳೂರು ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಯೋಜನೆಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕೆ ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಯನ್ ಸೆಂಟರ್ ನಲ್ಲಿ ಸಂಜೆ5 ಗಂಟೆಗೆ ಚಾಲನೆ ನೀಡಲಿದ್ದಾರೆ. ರಾತ್ರಿ 9.20 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ 9.55 ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.