ಕಾರ್ಕಳ,ಅ 14(MSP): ಕಾಡು ಕಡಿದು ಮಾನವ ಸೃಷ್ಟಿಸಿದ್ದು ಕಾಂಕ್ರೀಟ್ ನಾಡನ್ನು. ಮನುಷ್ಯನೇನು ಅದರೊಳಗೆ ಬಂಧಿಯಾಗಿ ಬದುಕುವುದನ್ನು ಕಲಿತ, ಆದರೆ ಪ್ರಾಣಿಗಳು ? ಕಾಡೇ ಇಲ್ಲದ ಮೇಲೆ ಬೇಟೆಯಾಡುವುದು ಹೇಗೆ ? ಬದುಕುವುದು ಹೇಗೆ?. ಹೀಗಾಗಿ ಕಾಡುಪ್ರಾಣಿಗಳು ಅನಿವಾರ್ಯವಾಗಿ ಆಹಾರ ಹುಡುಕುತ್ತಾ ನಾಡಿಗೆ ಲಗ್ಗೆ ಹಾಕುವುದು ಸಾಮಾನ್ಯ. ಸಾಕು ಪ್ರಾಣಿಗಳನ್ನು ಭಕ್ಷಿಸಿಲು ಊರಿಗೆ ಬರುತ್ತಿರುವ ಚಿರತೆಯಂತಹ ಪ್ರಾಣಿಗಳು ಕೊನೆಗೆ ಆವರಣವಿಲ್ಲದ ಬಾವಿಗೆ ಬೀಳುವುದು, ಬೇಲಿಯಲಿಟ್ಟ ಉರುಳಿಗೆ ಬೀಳುವುದು ಸಾಮಾನ್ಯವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಈ ರೀತಿಯ ಮನಕಲಕುವ ದುರಂತ ಘಟನೆ ಕಾರ್ಕಳ ತಾಲೂಕಿನಾದ್ಯಂತ ವರದಿಯಾಗುತ್ತಿದೆ. ಮಾತ್ರವಲ್ಲ ಚಿರತೆಗಳು ಹಸಿವು ತಾಳಲಾರದೆ ಸಾಯುತ್ತಿರುವುದು ಅರಣ್ಯ ಇಲಾಖೆ ಕೂಡಾ ದೃಢಪಡಿಸಿದ್ದು, ಪ್ರಯೋಗಾಲಯದ ವರದಿ ಕೂಡಾ ಇದನ್ನು ಇನ್ನಷ್ಟು ಪುಷ್ಟೀಕರಿಸಿದೆ. ಆಹಾರದ ಕೊರತೆಯಿಂದ ಯರ್ಲಪ್ಪಾಡಿ ಮತ್ತು ಎಳ್ಳಾರೆಯಲ್ಲಿ ಎರಡು ಚಿರತೆಗಳು ಮೃತಪಟ್ಟಿದೆ. ಚಿರತೆಗಳ ಮರಣೋತ್ತರ ಪರೀಕ್ಷೆ ಪ್ರಕಾರ ಬೆಂಗಳೂರಿನ ಪ್ರಯೋಗಾಲಯ ನೀಡಿದ ವರದಿಯನ್ವಯ ಚಿರತೆಗಳು ಆಹಾರ ಸಿಗದೆ ಹಸಿವಿನಿಂದ ಮೃತಪಟ್ಟಿದೆ ಎಂದು ದೃಢಪಟ್ಟಿದೆ ಎನ್ನುತ್ತಾರೆ ಕಾರ್ಕಳದ ವಲಯದ ಅರಣ್ಯಾಧಿಕಾರಿ, ಜಿ.ಡಿ ದಿನೇಶ್ ಕುಮಾರ್.
ಇದಕ್ಕಾಗಿಯೇ ಇತ್ತೀಚೆಗೆ ಎಲ್ಲೆಡೆ ಆಹಾರ ಅರಸುತ್ತಾ ನಾಡಿಗೆ ಲಗ್ಗೆ ಇಟ್ಟು ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ ಚಿರತೆಗಳು. ಹಿಂದೆ ಬೋಗಿ ಮತ್ತು ಕರ್ಮರ್ ಗಿಡಗಳು ಹೊಂದಿದ ಕಾಡುಗಳಿತ್ತು. ಕೃಷಿ ಉದ್ದೇಶಗಳಿಗೆ ಅವುಗಳ ಎಲೆ ಮತ್ತು ಸೊಪ್ಪುಗಳು ಬಳಕೆಯಾಗುತ್ತಿತ್ತು. ಅಲ್ಲದೆ ಅಲ್ಲಿ ಮಾಂಸಹಾರಿ ಪ್ರಾಣಿಗಳ ಬಲಿ ಪ್ರಾಣಿಗಳು ವಾಸಮಾಡುತ್ತಿದ್ದು ಅವುಗಳಿಗೆ ಆಹಾರವಾಗುತ್ತಿದ್ದವು. ಆದರೆ ಇದೀಗ ಕೃಷಿ ಚಟುವಟಿಕೆಗಳ ಸ್ಥಗಿತ ಮತ್ತು ಕಾಡು ಕೂಡಾ ನಾಶವಾಗುತ್ತಿದೆ.