ಉಡುಪಿ, ಅ 13(SM): ಮಜ್ಜಿಗೆಯಲ್ಲಿ ಅಮಲು ಬರುವ ಪದಾರ್ಥ ಬೆರೆಸಿಕೊಟ್ಟು ಪ್ರಯಾಣಿಕರಿಬ್ಬರಿಂದ ಲಕ್ಷಾಂತರ ಮೌಲ್ಯದ ನಗ-ನಗದು ದರೋಡೆ ಮಾಡಿದ ಘಟನೆ ದೆಹಲಿ-ಎರ್ನಾಕುಲಾಮ್ ಸಂಚರಿಸುವ ಮಂಗಳ ಲಕ್ಷದೀಪ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. ಉಡುಪಿಯ ಕಿನ್ನಿಮೂಲ್ಕಿ ನಿವಾಸಿಯಾಗಿರುವ ರೈಲ್ವೆ ಯಾತ್ರಿ ಸಂಘದ ಕೋಶಾಧಿಕಾರಿ ರಾಮಚಂದ್ರ ಆಚಾರ್ಯ(60) ಹಾಗೂ ಅವರ ಅಕ್ಕ ರಾಧಮ್ಮ(75) ದರೋಡೆಗೆ ಒಳಗಾದವರು.
ರಾಮಚಂದ್ರ ಆಚಾರ್ಯ ತನ್ನ ಅಕ್ಕ ರಾಧಮ್ಮ ಹಾಗೂ ಇನ್ನೊಂದು ಬೋಗಿಯಲ್ಲಿದ್ದ ಇನ್ನಿಬ್ಬರು ಅಕ್ಕಂದಿರಾದ ಸೀಮಾ ರಾವ್ ಹಾಗೂ ತುಳಸಿ ಅವರೊಂದಿಗೆ ಮಹಾರಾಷ್ಟ್ರದ ನಾಸಿಕ್ ನಿಂದ ಉಡುಪಿಗೆ ಮರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.
ಮಹಾರಾಷ್ಟ್ರದ ನಾಸಿಕ್ ನ ಪೇಜಾವರ ಶಾಖಾ ಮಠದಲ್ಲಿ ನಡೆಯಬೇಕಿದ್ದ ತನ್ನ ಅಕ್ಕನ ಗಂಡನ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಮಚಂದ್ರ ಅವರು ತನ್ನ ಮೂವರು ಅಕ್ಕಂದಿರೊಂದಿಗೆ ಅ. 7ರ ಭಾನುವಾರದಂದು ರಾತ್ರಿ ಉಡುಪಿಯಿಂದ ಹೊರಟಿದ್ದರು. ಅದರಂತೆ ಅಲ್ಲಿ ಎಲ್ಲ ಕಾರ್ಯಗಳನ್ನು ಮುಗಿಸಿಕೊಂಡು ನಾಸಿಕ್ ರೋಡ್ ರೈಲ್ವೆ ನಿಲ್ದಾಣದಲ್ಲಿ ಅ. 11ರ ಗುರುವಾರ ಮುಂಜಾನೆ ೬.೨೦ಕ್ಕೆ ರಾಮಚಂದ್ರ ಹಾಗೂ ರಾಧಮ್ಮ ಎಸ್3 ಬೋಗಿಯಲ್ಲಿ ಮತ್ತು ಇನ್ನಿಬ್ಬರು ಅಕ್ಕಂದಿರು ಎಸ್2 ಬೋಗಿಯಲ್ಲಿ ಮರಳಿ ಉಡುಪಿಗೆ ಪ್ರಯಾಣಿಸುತ್ತಿದ್ದರು.
ಈ ವೇಳೆ ರಾಮಚಂದ್ರ ಹಾಗೂ ಅವರ ಅಕ್ಕ ಪ್ರಮಾಣಿಸುತ್ತಿದ್ದ ಎಸ್೩ ಬೋಗಿಯಲ್ಲಿ ಸುಮಾರು ೫೦ ವರ್ಷ ಪ್ರಾಯದ ಹಿಂದಿ ಮಾತನಾಡುವ ಇಬ್ಬರು ಗಂಡಸರು ಪ್ರಯಾಣಿಸುತ್ತಿದ್ದರು. ಇವರಿಗೆ ಅವರಿಬ್ಬರ ಪರಿಚಯವಾಗಿದೆ. ಇವರು ತಂದಿದ್ದ ತಿಂಡಿಗಳನ್ನು ಅವರಿಗೆ ನೀಡಿದ್ದಾರೆ. ಅವರು ಅದನ್ನು ಸ್ವೀಕರಿಸಿದ್ದಾರೆ. ನಾವು ದೆಹಲಿಯಿಂದ ಕೇರಳಕ್ಕೆ ಪ್ರಮಾಣ ಮಾಡುತ್ತಿದ್ದು, ನಾವು ಬಟ್ಟೆ ವ್ಯಾಪಾರಿಗಳೆಂದು ಪರಿಚಯ ಮಾಡಿಕೊಂಡಿದ್ದರು. ಸಂಜೆ 6 ಗಂಟೆ ವೇಳೆ ರೈಲು ಚಿಲ್ಪೋನ್ ರೈಲ್ವೆ ನಿಲ್ದಾಣಕ್ಕೆ ಬಂದ ವೇಳೆ ಸಹಪ್ರಯಾಣಿಕರು ರಾಮಚಂದ್ರ ಹಾಗೂ ಅವರ ಅಕ್ಕ ರಾಧಮ್ಮನಿಗೆ ಮಜ್ಜಿಗೆ ನೀಡಿದ್ದರು.
ರಾಮಚಂದ್ರ ಅವರು ಅರ್ಧ ಕುಡಿದು ಬಿಸಾಡಿದರೆ, ರಾಧಮ್ಮ ಪೂರ್ತಿ ಕುಡಿದಿದ್ದಾರೆ. ಆ ಬಳಿಕ ಇಬ್ಬರು ಪ್ರಜ್ಞೆ ಕಳೆದುಕೊಂಡಿದ್ದರು. ಅ. 12ರ ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ ರೈಲು ಕುಂದಾಪುರ ತಲುಪಿದ ವೇಳೆ ರಾಮಚಂದ್ರ ಅವರಿಗೆ ಪ್ರಜ್ಞೆ ಮರಳಿತ್ತು. ಈ ವೇಳೆ ಅವರ ಜೇಬಿನಲ್ಲಿದ್ದ 15 ಸಾವಿರ ನಗದು, ಪರ್ಸ್ ನಲ್ಲಿದ್ದ 15 ಸಾವಿರ, ಮೊಬೈಲ್ ಹಾಗೂ ಅಕ್ಕ ರಾಧಮ್ಮನವರ ಗುಂಡು ಸರ (ಮೂರು ಪವನ್), ಒಂದು ಕಿವಿಯ ಓಲೆ, 15 ಸಾವಿರ ನಗದು ಮತ್ತು 2 ಸಾವಿರ ಮೌಲ್ಯದ ಹೊಸ ಬಟ್ಟೆ ಕಳವಾಗಿರುವುದು ಅರಿವಿಗೆ ಬಂದಿದೆ. ಆ ಇಬ್ಬರು ದುಷ್ಕರ್ಮಿಗಳು ಇವರ ಬಳಿಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ-ನಗದು ದರೋಡೆ ಮಾಡಿ ಪರಾರಿಯಾಗಿದ್ದರು.
ಕೂಡಲೇ ಅವರು ಇನ್ನೊಂದು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ತನ್ನ ಇನ್ನಿಬ್ಬರು ಅಕ್ಕಂದರಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಬಂದು ನೋಡುವಾಗ ಅಕ್ಕ ರಾಧಮ್ಮ ಇನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಮಲಗಿಕೊಂಡಿದ್ದರು. ನಂತರ ಉಡುಪಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಘಟನೆಯ ಕುರಿತಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.