ಸುಳ್ಯ, ಜು. 14 (DaijiworldNews/SM): ಸುಳ್ಯದ ಜಯನಗರ ಸಮೀಪ ಕ್ರಿಕೆಟ್ ಆಟದ ವಿಚಾರದಲ್ಲಿ ನಡೆದಿರುವ ವಾಗ್ವಾದ ಹಾಗೂ ವೀಡಿಯೋ ವೈರಲ್ ವಿಚಾರ ಇದೀಗ ಸುಖಾಂತ್ಯಗೊಂಡಿದೆ.
ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಹಾಗೂ ಇನ್ನು ಮುಂದೆ ದೈವಸ್ಥಾನದ ಆವರದೊಳಗೆ ಆಟ ಆಡಲು ಇಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಸುಳ್ಯದ ಜಯನಗರ ಸಮೀಪದ ಕೊರಂಬಡ್ಕ ಆದಿಮೊಗೆರ್ಕಳ ದೈವಸ್ಥಾನದಲ್ಲಿ ಕ್ರಿಕೆಟ್ ಆಡುತ್ತಿದ್ದದ್ದಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದ ಕುರಿತ ವೀಡಿಯೋ ಒಂದು ವೈರಲ್ ಆಗಿತ್ತು. ದೈವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಗಿಡ ನೆಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಅಲ್ಲಿ ಗುಂಡಿ ತೆಗೆಯಲಾಗಿತ್ತು. ಇದರಿಂದ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಯುವಕರು ಆಡಳಿತ ಮಂಡಳಿಯವರ ಕ್ರಮ ಸರಿಯಲ್ಲ ಎಂದು ಹೇಳಿದ್ದರು.
ದೈವಸ್ಥಾನದ ಆವರಣದಲ್ಲಿ ಕ್ರಿಕಟ್ ಆಡಲು ಅವಕಾಶವಿಲ್ಲ ಎಂದದ್ದಕ್ಕೆ ನಾವೂ ಹಿಂದುಗಳು ಎಂದು ಯುವಕರು ಮರು ಉತ್ತರಿಸಿದ್ದಾರೆ. ಬಳಿಕ ಅಲ್ಲಿದ್ದ ಅನ್ಯ ಧರ್ಮದ ಯುವಕನೊಬ್ಬನನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಬಳಿಕ ಯುವಕರು ಠಾಣೆ ಮೆಟ್ಟಿಲೇರಿದ್ದರು. ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಡುವ ಕ್ರಮ ಸರಿಯಲ್ಲ ಎಂಬ ಕುರಿತು ಮೊದಲೇ ಸಾರ್ವಜನಿಕವಾಗಿ ನಿರ್ಧಾರವಾಗಿದ್ದರೂ ಆಟ ಆಡಿದ್ದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಧರ್ಮ ದ್ವೇಷ ಬಿತ್ತುವ ಉದ್ದೇಶ ನಮಗಿರಲಿಲ್ಲ ಎಂದು ಪ್ರವೀಣ ಅವರು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ.
ಸದ್ಯ ಮಾತುಕತೆಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ.