ಮಂಗಳೂರು, ಅ.13(SS): ಸುಬ್ರಹ್ಮಣ್ಯ ದೇವಾಲಯ ಹಾಗೂ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಮಧ್ಯದ ವಿವಾದ ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠ ಇಂದು ಆಸ್ತಿಕ ವರ್ಗದ ಮನಸ್ಸಿನಲ್ಲಿ ಹಲವಾರು ಗೊಂದಲಗಳನ್ನು ಹುಟ್ಟುಹಾಕಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ನಡುವಿನ ವಿವಾದ ಇದೀಗ ಮತ್ತೆ ತಾರಕಕ್ಕೇರಿದ್ದು, ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ಕುಕ್ಕೆ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಆಡಳಿತ ಮಂಡಳಿ ಕ್ರಮದ ವಿರುದ್ದ ಸ್ವಾಮೀಜಿ ಉಪವಾಸ ಆರಂಭಿಸಿದ್ದಾರೆ.
ಮಠದಲ್ಲಿ ಸುಬ್ರಹ್ಮಣ್ಯನ ಸೇವೆಗಳನ್ನು ನಡೆಸದಂತೆ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಇಷ್ಟು ಮಾತ್ರವಲ್ಲದೆ ಕೆಲ ದಿನಗಳಿಂದ ದೇವಸ್ಥಾನದ ಧ್ವನಿವರ್ಧಕವನ್ನು ಮಠದತ್ತ ತಿರುಗಿಸಿದ್ದು, ತನಗೆ ನಿತ್ಯ ಜಪ ಮಾಡಲೂ ತೊಂದರೆಯಾಗುತ್ತಿದೆ. ಅಲ್ಲದೇ ಗೋಶಾಲೆಗೆ ಕುಮಾರ ಪರ್ವತದಿಂದ ಬರುತ್ತಿದ್ದ ನೀರನ್ನು ನಿಲ್ಲಿಸಿ ತೊಂದರೆ ಕೊಡಲಾಗುತ್ತಿದೆ. ಸುಬ್ರಹ್ಮಣ್ಯನ ದರುಶನಕ್ಕೂ ಅವಕಾಶ ನೀಡದಂತೆ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಮಠ ಮತ್ತು ದೇವಸ್ಥಾನದ ನಡುವೆ ಹಲವಾರು ವರ್ಷಗಳಿಂದ ವಿವಾದ ಇದ್ದು, ಕೆಲ ವರ್ಷಗಳ ಹಿಂದೆಯಷ್ಟೇ ಸ್ವಾಮೀಜಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಲಾಗಿತ್ತು. ದೇವರ ದರುಶನ ಮತ್ತು ಉತ್ಸವಗಳಲ್ಲಿ ಭಾಗಿಯಾಗಲು ಅವಕಾಶ ದೊರೆತಿತ್ತು. ಇದೀಗ ವಿವಾದ ತಾರಕಕ್ಕೇರಿ ದಿನಕ್ಕೆ ಒಂದು ಲೋಟ ನೀರು ಮಾತ್ರ ಕುಡಿದು ಅನಿರ್ದಿಷ್ಟವಧಿ ಉಪವಾಸಕ್ಕೆ ಸ್ವಾಮೀಜಿ ನಿರ್ಧರಿಸಿದ್ದಾರೆ.