ಬಂಟ್ವಾಳ, ಜು. 13 (DaijiworldNews/SM): ಸುಮಾರು 1.40 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡ ಆಕ್ಸಿಜನ್ ಘಟಕದಿಂದ ಬಂಟ್ವಾಳದ ಆಕ್ಸಿಜನ್ ಬೇಡಿಕೆಗಳ ಪೂರೈಕೆಯ ಜತೆಗೆ ಇತರ ಭಾಗಗಳಿಗೂ ಆಕ್ಸಿಜನ್ ಪೂರೈಕೆಗೆ ನೆರವಾಗಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸ್ವಾಮ್ಯದ ಕಂಪೆನಿಗಳ ಸಾರ್ವಜನಿಕ ಹೊಣೆಗಾರಿಕಾ ನಿಧಿಯಿಂದ 1.40 ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ ನಿಮಿಷಕ್ಕೆ 500ಲೀ. ಉತ್ಪಾದನಾ ಸಾಮರ್ಥ್ಯದ ನೂತನ ಆಕ್ಸಿಜನ್ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಅವರು ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿಯವರು, ಘಟಕ ಅನುಷ್ಠಾನದ ಹಿಂದೆ ಮಾರ್ಗದರ್ಶನ ನೀಡಿದ ಸಂಸದರು, ಶ್ರಮಿಸಿದ ಶಾಸಕರು, ಅನುದಾನ ನೀಡಿದ ಕಂಪೆನಿಗಳು ಹಾಗೂ ಎಲ್ಲಾ ಅಧಿಕಾರಿ ವರ್ಗಕ್ಕೆ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.