ಉಡುಪಿ, ಜು.13 (DaijiworldNews/HR): ಝೀಕಾ ವೈರಸ್ ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲೂ ಕೂಡ ಎಚ್ಚರ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿರು ಮಾಹಿತಿ ನೀಡಿರುವ ಅವರು, ಸಾರ್ವಜನಿಕರು ಯಾವುದೇ ಜ್ವರವಿದ್ದಲ್ಲಿ ತಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುಬೇಕು ಎಂದು ತಿಳಿಸಿ ಝೀಕಾ ವೈರಸ್ ಕುರಿತು ಈ ಕೆಳಗಿನ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದ್ದಾರೆ.
ಝೀಕಾ ವೈರಸ್ ರೋಗ ಹರಡುವ ವಿಧಾನ:
*ಡೆಂಗ್ಯೂ,ಚಿಕುನ್ ಗುನ್ಯಾ, ವೆಸ್ಟ ನೈಲ್ ಹಾಗೂ ಹಳದಿ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಝೀಕಾ ವೈರಸ್ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
*ಝೀಕಾ ವೈರಸ್ ಕೇವಲ ಸೊಳ್ಳೆಗಳ ಕಡಿತದಿಂದ ಹರಡುವುದಲ್ಲದೇ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಹರಡುತ್ತದೆ.
*ಇನ್ನು ಮಳೆಗಾಲ ಈ ವೈರಸ್ ಹರಡಲು ಅನುಕೂಲವಾದ ವಾತಾವರಣ ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳ ಸಾಂದ್ರತೆ ಜಾಸ್ತಿ ಇರುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ.
ಝೀಕಾ ವೈರಸ್ನ ರೋಗ ಲಕ್ಷಣಗಳು:
*ತೀವ್ರತರವಾದ ಜ್ವರ, ಮೈ-ಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದೆ. ರಕ್ತ ಹಾಗೂ ಮೂತ್ರವನ್ನು ಪರೀಕ್ಷಿಸಿದಾಗ ಈ ರೋಗದ ಸೋಂಕು ಇರುವುದು ಕಂಡುಬರುತ್ತದೆ.
ಝೀಕಾ ವೈರಸ್ನಿಂದ ಸಂಭವಿಸಬಹುದಾದಂತಹ ಅಪಾಯಗಳು:
*ಗರ್ಭಿಣಿಯರು ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಗರ್ಭಪಾತವಾಗುವ ಸಾಧ್ಯತೆ ಇದ್ದು, ಹುಟ್ಟಲಿರುವ ಮಗುವಿಗೂ ಕೂಡ ಸೋಂಕು ರವಾನೆಯಾಗಬಹುದಾಗಿದೆ.
*ಹುಟ್ಟುವ ಮಕ್ಕಳಲ್ಲಿ ಅಂಗಾಗ ನ್ಯೂನತೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.
*ವಯಸ್ಕರಲ್ಲಿ ತೀವ್ರತರವಾದ ನರಗಳ ದೌರ್ಬಲ್ಯ ವಿರಳವಾಗಿ ಕಾಣಿಸಿಕೊಳ್ಳಬಹುದು.
ಸೊಳ್ಳೆಗಳ ಉತ್ಪತ್ತಿ ತಾಣಗಳು:
ಈ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತದೆ. ಡ್ರಮ್, ನೀರಿನ ತೊಟ್ಟಿ, ಏರ್ ಕೂಲರ್, ಅನುಪಯುಕ್ತ ಟೈರ್, ಒಡೆದ ಮಡಕೆ, ತೆಂಗಿನ ಚಿಪ್ಪು, ತಾರಸಿ ಮನೆಗಳ ಮೇಲ್ಚಾವಣಿ, ಘನತ್ಯಾಜ್ಯ ವಸ್ತುಗಳು, ಅಡಿಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳು, ರಬ್ಬರ ತೋಟಗಳಲ್ಲಿ ರಬ್ಬರ ಸಂಗ್ರಹಿಸುವ ಕಫ್, ಹೂವಿನ ಕುಂಡ, ಇತ್ಯಾದಿಗಳಲ್ಲಿ ನೀರು ನಿಂತು ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ.
ಇನ್ನು ರೋಗ ಲಕ್ಷಣಗಳು ಕಂಡು ಬಂದರೆ ಸಾಕಷ್ಟು ದ್ರವ ಆಹಾರಗಳನ್ನು ಸೇವಿಸುವುದರ ಮೂಲಕ ನಿರ್ಜಲೀಕರಣವನ್ನು ತಡೆಯಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು ಮತ್ತು ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.