ಬೆಂಗಳೂರು, ಅ13(SS): ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡಗು. ಮಹಾಘಟಬಂಧನ ಕರ್ನಾಟಕದಲ್ಲಿಯೇ ಹುಟ್ಟಿ ಕರ್ನಾಟಕದಲ್ಲಿಯೇ ಅಂತ್ಯ ಕಂಡಿದೆ ಎಂದು ಶೋಭ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ನಗರದ ಹೆಚ್ಎಎಲ್ ನೌಕಕರೊಂದಿಗೆ ರಾಹುಲ್ ಗಾಂಧಿ ನಡೆಸುತ್ತಿರುವ ಸಭೆ, ಸಂವಾದ ಅನಧಿಕೃತವಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಗೊಂದಲ ನಿರ್ಮಾಣ ಮಾಡಲು ಆಗಮಿಸಿದ್ದಾರೆ. ರಾಹುಲ್ ಗಾಂಧಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಅಷ್ಟೇ. ಆದರೆ ಇಂದು ನಡೆಯುವ ಸಭೆ ಅನಧಿಕೃತ ಎಂದು ಹೆಚ್ಎಎಲ್ ನೌಕರರೇ ಹೇಳಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಲವಾರು ಕಂಪನಿಗಳು ಮುಚ್ಚಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು. ರಾಹುಲ್ ಗಾಂಧಿ ರಫೇಲ್ ಒಪ್ಪಂದವನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಂವಾದ ನಡೆಸ್ತಿದ್ದಾರೆ...? ಹೆಚ್ಎಎಲ್ ನೌಕರರ ಸಭೆ ಕರೆಯುವ ಅಧಿಕಾರ ರಾಹುಲ್ ಗಾಂಧಿಗೆ ಎಲ್ಲಿದೆ..? ಈ ಸಂವಾದದ ಮೂಲಕ ಭಾರತೀಯ ಸೈನ್ಯದ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ ಪ್ರಯತ್ನ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕಳೆದ 70 ವರ್ಷಗಳಲ್ಲಿ ಸರಿಯಾಗಿ ಪೂರೈಕೆ ಮಾಡಿಲ್ಲ. ಆದರೆ ಈಗ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸಂಶಯ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದವರು ತಿಳಿಸಿದರು.
ಸಿಎಂ ಕುಮಾರಸ್ವಾಮಿ ತಮ್ಮ ಆಡಳಿತದ ಅರ್ಧದಷ್ಟು ಸಮಯ ದೇವಸ್ಥಾನಗಳಲ್ಲಿ ಕಳೆದಿದ್ದಾರೆ. ಬಾಕಿ ಅರ್ಧದಷ್ಟು ಸಮಯ ಕೇವಲ ಭರವಸೆ ನೀಡುವಲ್ಲಿ ಕಳೆದಿದ್ದಾರೆ. ಕರ್ನಾಟಕದ ಸಿಎಂ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ದಿನಕ್ಕೊಂದು ವಿಚಾರ ಹೇಳುತ್ತಿದ್ದಾರೆ ಎಂದು ಟೀಕಿಸಿದರು.