ಮಂಗಳೂರು, ಅ13(SS): ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿದಷ್ಟೂ ಮತ್ತೆ ಮತ್ತೆ ಹೆಚ್ಚಾಗುತ್ತಿರುವುದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಮೀಟರ್ ಬಡ್ಡಿ ದಂಧೆಗೆ ತಳಮಟ್ಟದಲ್ಲಿ ಕಡಿವಾಣ ಹಾಕಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ಹಾವಳಿ ವಿಪರೀತವಾಗಿದ್ದು, ಗುಪ್ತವಾಗಿ ನಡೆಯುತ್ತಿದ್ದ ಈ ಅಕ್ರಮ ದಂಧೆ ಇದೀಗ ರಾಜಾರೋಷವಾಗಿ ನಡೆಯುತ್ತಿದೆ. ದುಡ್ಡು ಪಡೆದುಕೊಂಡವರು ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದರೆ. ಮೀಟರ್ ಬಡ್ಡಿ ಧಂದೆಕೋರರು ಅಮಾಯಕ ಮಂದಿಯನ್ನು ದಿನನಿತ್ಯ ಕಾಡುತ್ತಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೀಟರ್ ಬಡ್ಡಿ ದಂಧೆಯಿಂದ ಅದೆಷ್ಟೋ ಮಂದಿ ಅಮಾಯಕರು ಆತ್ಮಹತ್ಯೆ ಮಾಡಿ ಜೀವನವನ್ನು ಕೊನೆಗೊಳಿಸುವ ನಿರ್ಧಾರಕ್ಕೂ ಬರುತ್ತಿದ್ದಾರೆ. ಶುಕ್ರವಾರ ನಗರದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲೂ ಈ ಬಗ್ಗೆ ದೂರು ಬಂದಿದೆ. ಈ ನಿಟ್ಟಿನಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಡ್ಡಿ ಮೀಟರ್ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವುದಾಗಿ ಟಿ ಆರ್ ಸುರೇಶ್ ಭರವಸೆ ನೀಡಿದ್ದಾರೆ. ಅಲ್ಲದೆ ದೌರ್ಜನ್ಯಕ್ಕೊಳಗಾದವರು ಈ ಬಗ್ಗೆ ದೂರು ನೀಡಿದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಮೀಟರ್ ಬಡ್ಡಿ ದಂಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಅವರು ಸುತ್ತೋಲೆ ಹೊರಡಿಸಿ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದ್ದಾರೆ.