ಮಂಗಳೂರು, ಜು 12 (DaijiworldNews/PY): ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಕರಾವಳಿಯಾದ್ಯಂತ ಭಾನುವಾರವೂ ಮಳೆ ಮುಂದುವರಿದಿತ್ತು.
ಸಾಂದರ್ಭಿಕ ಚಿತ್ರ
ಶನಿವಾರ ತಡರಾತ್ರಿ ಮಂಗಳೂರು ನಗರದಲ್ಲಿ ಮಳೆಯಾಗಿದ್ದು, ಭಾನುವಾರ ಬೆಳಗ್ಗಿನವರೆಗೆ ಮಳೆ ಮುಂದುವರಿದಿತ್ತು. ಅಪರಾಹ್ನದ ವೇಳೆ ಮತ್ತೆ ಮಳೆ ಬಿರುಸುಗೊಂಡಿದ್ದು, ನಗರದಲ್ಲಿನ ಕೆಲವು ತಗ್ಗು ಪ್ರದೇಶಗಳಲ್ಲಿ ನೀರಿ ನಿಂತು ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾನುವಾರವಾದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದು, ಟ್ರಾಫಿಕ್ ಜಾಂಮ್ ಉಂಟಾಗಿಲ್ಲ. ನೂಜಿ ಬಾಳ್ತಿಲ ಬಳಿ ಮನೆಯೊಂದಕ್ಕೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯಗಿದೆ.
ಜಿಲ್ಲೆಯ ಸುರತ್ಕಲ್, ಬೆಳ್ತಂಗಡಿ, ಉಪ್ಪಿನಂಗಡಿ, ಗುರುವಾಯನಕೆರೆ, ಮಡಂತ್ಯಾರು, ಧರ್ಮಸ್ಥಳ, ಪುಂಜಾಲಕಟ್ಟೆ, ಪುತ್ತೂರು, ಕಡಬ, ಸುಳ್ಯ, ಸುಬ್ರಹ್ಮಣ್ಯ, ಉಳ್ಳಾಲ, ಪಂಜ, ಬಂಟ್ವಾಳ, ಕಲ್ಲಡ್ಕ, ವಿಟ್ಲ, ಕನ್ಯಾನ ಸೇರಿಂದತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು. ಕಡಲ ಅಲೆಗಳ ಅಬ್ಬರವೂ ಕೂಡಾ ಜೋರಾಗಿತ್ತು.
ಉಡುಪಿ ಜಿಲ್ಲೆಯಾದ್ಯಂತ ಕೂಡಾ ದಿನಪೂರ್ತಿ ಮಳೆ ಸುರಿದಿದ್ದು, ಕೆಲವು ಕಡೆಗಳಲ್ಲಿ ಮಳೆ ನೀರಿನಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕರಾವಳಿ ಭಾಗದಲ್ಲಿ ಜುಲೈ 12ರ ಬೆಳಗ್ಗೆ 8.30ರಿಂದ ಜುಲೈ 16ರ ಬೆಳಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭ ಕರಾವಳಿ ಭಾಗದಲ್ಲಿ 115.6 ಮೀ.ಮೀ. ನಿಂದ 204.4 ಮೀ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಮಳೆಯೊಂದಿಗೆ ಗಾಳಿ, ಸಿಡಿಲು ಇರಲಿದೆ. ಕಡಲ ಅಬ್ಬರವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.